ಕೈಕಾಲುಗಳಿಗೆ ಕೋಳ ತೊಟ್ಟು ಸಮುದ್ರದಲ್ಲಿ 3.5ಕಿ.ಮೀ.ಈಜು; ಗಂಗಾಧರ ಕಡೆಕಾರ್ ರಿಂದ ಹೊಸ ವಿಶ್ವದಾಖಲೆ
ಉಡುಪಿ, ಜ.24: ದಾಖಲೆ ಈಜುಪಟು 66ರ ಹರೆಯದ ಗಂಗಾಧರ ಜಿ.ಕಡೆಕಾರ್ ತನ್ನ ಕೈ ಮತ್ತು ಕಾಲುಗಳಿಗೆ ಕೋಳ ತೊಡಿಸಿ ಸಮುದ್ರದಲ್ಲಿ ನಿರಂತರ 3.5ಕಿ.ಮೀ. ದೂರ ಸುಮಾರು 5 ಗಂಟೆ 35 ನಿಮಿಷಗಳ ಕಾಲ ಈಜುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಕಡೆಕಾರು ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಕಿದಿಯೂರು ಪಡುಕೆರೆ ಶ್ರೀದೇವಿ ಭಜನಾ ಮಂದಿರದ ಬಳಿಯ ಕಡಲ ತೀರದಿಂದ ಇವರು ತನ್ನ ಕೈ ಮತ್ತು ಕಾಲುಗಳಿಗೆ ಕೋಳ ತೊಟ್ಟು ಬೆಳಗ್ಗೆ 7.50ಕ್ಕೆ ಸಮುದ್ರಕ್ಕೆ ಧುಮಿಕಿದರು. ಈ ದಾಖಲೆ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಚಾಲನೆ ನೀಡಿದರು. ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉದ್ಯಮಿಗಳಾದ ಸಾಧು ಸಾಲ್ಯಾನ್, ಆನಂದ ಸುವರ್ಣ, ಕಡೆಕಾರ್ ಗ್ರಾಪಂ ಅಧ್ಯಕ್ಷೆ ಸರಸ್ವತಿ ಹಾಜರಿದ್ದರು.
ತೀರದಿಂದ ಸುಮಾರು 1500 ಮೀಟರ್ ದೂರ ಸಮುದ್ರದಲ್ಲಿ ಈಜಿದ ಅವರು, ಮತ್ತೆ 500 ಮೀಟರ್ ವಾಪಾಸ್ಸು ತೀರದತ್ತ ಬಂದರು. ಅಲ್ಲಿಂದ ಮತ್ತೆ 500 ಕಿ.ಮೀ. ಸಮುದ್ರದತ್ತ ಸಾಗುವ ಮೂಲಕ 2500 ಮೀಟರ್ ದೂರವನ್ನು ಪೂರ್ಣಗೊಳಿಸಿದರು. ತದನಂತರ ಇವರು 1000 ಮೀಟರ್ ದೂರ ತೀರದ ಕಡೆ ಈಜಿ ಮಧ್ಯಾಹ್ನ 1.25ರ ಸುಮಾರಿಗೆ ಗುರಿ ತಲುಪಿದರು.
ಗಂಗಾಧರ್ ಹೊರಡುವಾಗಲೇ ಹೆಚ್ಚು ಗಾಳಿ ಇದ್ದ ಕಾರಣ ಸಮುದ್ರ ಪ್ರಕ್ಷುಬ್ಧ ವಾಗಿತ್ತು. ಇದರಿಂದ ಅಲೆಗಳನ್ನು ಎದುರಿಸಿ ಬಹಳ ಶ್ರಮಪಟ್ಟು ಈಜಬೇಕಾಯಿತು. ಆದರೂ ಛಲ ಬಿಡದ ಗಂಗಾಧರ್ ನಿರಂತರ 5.35 ಗಂಟೆಗಳ ಕಾಲ ಒಟ್ಟು 3.5.ಕಿ.ಮೀ. ದೂರ ಈಜುವುದರೊಂದಿಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು.
ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ತೀರ್ಪುಗಾರ ಮನೀಷ್ ವೈಷ್ಣಾಯ್ ಹಾಜರಿದ್ದು, ವಿಶ್ವದಾಖಲೆಯ ತಾತ್ಕಾಲಿಕ ಪ್ರಮಾಣ ಪತ್ರವನ್ನು ಗಂಗಾಧರ್ ಕಡೆಕಾರ್ ಅವರಿಗೆ ಹಸ್ತಾಂತರಿಸಿದರು. ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಡೆಕಾರ್ ಗ್ರಾಪಂ ಅಧ್ಯಕ್ಷೆ ಸರಸ್ವತಿ, ಜಿಪಂ ಮಾಜಿ ಸದಸ್ಯ ದಿವಾಕರ ಕುಂದರ್, ಉದ್ಯಮಿ ಆನಂದ ಸುವರ್ಣ, ನಗರಸಭಾ ಸದಸ್ಯ ವಿಜಯ ಕುಂದರ್, ಕ್ಲಬ್‌ನ ಉಪಾಧ್ಯಕ್ಷರಾದ ಚಂದ್ರ ಕುಂದರ್, ಹರ್ಷ ಮೈಂದನ್, ಪದ್ಮಾವತಿ ಗಂಗಾಧರ ಮೊದಲಾದವರು ಉಪಸ್ಥಿತರಿದ್ದರು.
ಲಕ್ಷ್ಮಣ್ ಮೈಂದನ್ ಸ್ವಾಗತಿಸಿದರು. ಉಮೇಶ್ ಕುಂದರ್ ವಂದಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಜಿ.ಕಡೆಕಾರು ಕಳೆದ ವರ್ಷ ಕಿದಿಯೂರು ಪಡೆಕೆರೆಯ ಸಮುದ್ರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು, ಬೀಗ ಹಾಕಿ 1.4.ಕಿ.ಮೀಟರ್ ದೂರ ಬ್ರೆಸ್ಟ್ ಸ್ಟೋಕ್ ಶೈಲಿ ಯಲ್ಲಿ ಈಜಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ರಾಷ್ಟ್ರೀಯ ದಾಖಲೆ ಯನ್ನು ನಿರ್ಮಿಸಿದ್ದರು.
''ಈ ಹೊಸ ಸಾಧನೆಯಿಂದ ತುಂಬಾ ಖುಷಿಯಾಗಿದೆ. ನಾನು ಮಕ್ಕಳಿಗೆ ಈಜು ತರಬೇತಿ ನೀಡುವುದರಿಂದ ಮೊದಲು ನಾನು ಏನಾದರೂ ಸಾಧಿಸಿ ಮಕ್ಕಳಿಗೆ ಸ್ಪೂರ್ತಿಯಾಗಬೇಕೆಂಬ ಉದ್ದೇಶದಿಂದ ಈ ದಾಖಲೆಯನ್ನು ಮಾಡಿದ್ದೇನೆ. ಕಡಲಿನಲ್ಲಿ ಹೆಚ್ಚು ಗಾಳಿ ಇದ್ದುದರಿಂದ ಈಜಲು ತುಂಬಾ ಕಷ್ಟಪಡಬೇಕಾಯಿತು. ಆದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಛಲದೊಂದಿಗೆ ಈಜಿದ್ದೇನೆ. ಕೈ ಕಾಲುಗಳಿಗೆ ಕೋಳ ಹಾಕಿರುವುದರಿಂದ ದೇಹವನ್ನು ಬಳಸಿಕೊಂಡು ಡಾಲ್ಫಿನ್ ಮಾದರಿ ಯಲ್ಲಿ ಈಜಿದ್ದೇನೆ''
-ಗಂಗಾಧರ ಕಡೆಕಾರ್, ಈಜುಪಟು
‘ನಾನು ಈವರೆಗೆ ನೋಡಿರುವ ವಿಶ್ವದಾಖಲೆಯಲ್ಲಿ ಈ ದಾಖಲೆಯು ಬಹಳ ವಿಶೇಷವಾಗಿತ್ತು. ಇವರ ಈ ಸಾಧನೆ ಸಾಮಾನ್ಯವಾಗಿರುವುದಲ್ಲ. 66ರ ಹರೆಯದಲ್ಲೂ ಇಂತಹ ಸಾಧನೆ ಮಾಡಿರುವುದು ಆಶ್ಚರ್ಯವಾಗುತ್ತದೆ. ಇವರಿಗೆ ನಾವು ಇಂದು ತಾತ್ಕಾಲಿಕವಾಗಿ ಪ್ರಮಾಣಪತ್ರವನ್ನು ನೀಡುತ್ತೇವೆ. ಮುಂದೆ ಮೂಲ ಪ್ರಮಾಣ ಪತ್ರವನ್ನು ಕಳುಹಿಸಿಕೊಡಲಾಗುವುದು’
-ಮನೀಷ್ ವೈಷ್ಣಾಯ್, ತೀರ್ಪುಗಾರರು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್.