×
Ad

ಈ ವಾರದ ಕೊನೆಗೆ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಹಸ್ತಾಂತರ ಸಾಧ್ಯತೆ: ಅಧಿಕಾರಿಗಳಿಂದ ಮಾಹಿತಿ

Update: 2022-01-24 20:08 IST
photo:PTI

ಹೊಸದಿಲ್ಲಿ,ಜ.24: ಈ ವಾರದ ಅಂತ್ಯದ ವೇಳೆಗೆ ಏರ್ ಇಂಡಿಯಾ ವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ಸೋಮವಾರ ತಿಳಿಸಿದರು.

ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಬಳಿಕ ಕಳೆದ ವರ್ಷದ ಅ.8ರಂದು ಸರಕಾರವು ಏರ್ ಇಂಡಿಯಾವನ್ನು 18,000 ಕೋ.ರೂ.ಗಳಿಗೆ ಟಾಟಾ ಸಮೂಹದ ಹೋಲ್ಡಿಂಗ್ ಕಂಪನಿಯ ಅಂಗಸಂಸ್ಥೆ ಟ್ಯಾಲೇಸ್ ಪ್ರೈ.ಲಿ.ಗೆ ಮಾರಾಟ ಮಾಡಿತ್ತು. ಅ.11ರಂದು ಟಾಟಾ ಸಮೂಹಕ್ಕೆ ಲೆಟರ್ ಆಫ್ ಇಂಟೆಂಟ್ ಅಥವಾ ಆಶಯ ಪತ್ರವನ್ನು ವಿತರಿಸುವ ಮೂಲಕ ಸರಕಾರವು ಏರ್ ಇಂಡಿಯಾದಲ್ಲಿನ ತನ್ನ ಶೇ.100 ಪಾಲು ಬಂಡವಾಳವನ್ನು ಮಾರಾಟ ಮಾಡಲು ತಾನು ಸಿದ್ಧವಿರುವುದಾಗಿ ದೃಢಪಡಿಸಿತ್ತು. ಅ.25ರಂದು ಕೇಂದ್ರವು ಶೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು.

ಮಾರಾಟಕ್ಕೆ ಸಂಬಂಧಿಸಿದ ಉಳಿದ ಔಪಚಾರಿಕತೆಗಳು ಮುಂದಿನ ಕೆಲವು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು,ವಾರಾಂತ್ಯದಲ್ಲಿ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಒಪ್ಪಂದದ ಅಂಗವಾಗಿ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ಎಸ್‌ಎಟಿಎಸ್‌ನಲ್ಲಿ ಶೇ.50ರಷ್ಟು ಪಾಲು ಬಂಡವಾಳವನ್ನೂ ಹಸ್ತಾಂತರಿಸಲಾಗುವುದು.
 
2003-04ರಿಂದ ಇದು ಮೂರನೇ ಖಾಸಗೀಕರಣವಾಗಲಿದೆ. ಟಾಟಾ ಈಗಾಗಲೇ ಏರ್ ಏಷ್ಯಾ ಮತ್ತು ಸಿಂಗಪುರ ಏರ್‌ಲೈನ್ಸ್‌ನೊಂದಿಗಿನ ಜಂಟಿ ಯೋಜನೆ ವಿಸ್ತಾರದಲ್ಲಿ ಕನಿಷ್ಠ ಶೇ.51ರಷ್ಟು ಪಾಲು ಬಂಡವಾಳವನ್ನು ಹೊಂದಿದ್ದು,ಏರ್ ಇಂಡಿಯಾ ಅದರ ತೆಕ್ಕೆಯನ್ನು ಸೇರಲಿರುವ ಮೂರನೇ ವಿಮಾನಯಾನ ಸಂಸ್ಥೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News