×
Ad

ನಾಟಕಗಳಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣ ಅಗತ್ಯ: ಸಚಿವ ಸುನಿಲ್ ಕುಮಾರ್

Update: 2022-01-24 20:50 IST

ಉಡುಪಿ, ಜ.24: ನಾಟಕೋತ್ಸವ ಕೇವಲ ಹಾಸ್ಯ, ಮನೋರಂಜನೆಗೆ ಸೀಮಿತವಾಗದೇ ಮನಸ್ಸು ಪರಿವರ್ತನೆ ಮಾಡುವ, ಸ್ವಾಸ್ಥ್ಯ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿ ತುಳುಕೂಟದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿ ಕೊಳ್ಳಲಾದ 20ನೆ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಅವರ ನೆನಪಿನ ತುಳು ನಾಟಕ ಸ್ಪರ್ಧೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಗಂಗಾಧರ ಕಿದಿಯೂರು ರಚಿತ ಮೆನ್ಕುನ ಸಿರಿ ಸಿಂಗಾರ ತುಳು ನಾಟಕ ಸಂಪುಟವನ್ನು ಬಿಡುಗಡೆಗೊಳಿಸಿದ ಮೂಡುಬಿದಿರೆ ಜೈನಮಠದ ಡಾ.ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಭಾರತದಲ್ಲಿರುವ ಸಂಸ್ಕೃತಿ, ಆಚಾರ-ವಿಚಾರ ಬೇರೆ ಯಾವ ದೇಶದಲ್ಲೂ ಕಾಣ ಸಿಗುವುದಿಲ್ಲ. ಕರಾವಳಿಯ ಸಂಸ್ಕೃತಿ ಸೊಬಗು, ನಾಟಕಕಾರರು, ಬರಹಗಾರರು ನಮ್ಮ ಜಗತ್ತಿನ ವಿಶೇಷವಾದ ಸಂಪತ್ತು ಎಂದು ತಿಳಿಸಿದರು.

ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ತುಳುಕೂಟದ ಸ್ಥಾಪಾಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್, ವಿಜಯ ಕುಮಾರ್ ಶೆಟ್ಟಿ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರ್, ಉದ್ಯಮಿ ಯು.ವಿಶ್ವನಾಥ ಶೆಣೈ, ತುಳು ಕೂಟದ ಉಪಾಧ್ಯಕ್ಷರಾದ ಸದಾಶಿವ ಭಟ್, ಮನೋರಮಾ ಶೆಟ್ಟಿ, ರಂಗಕರ್ಮಿ ಡಾ.ಭರತ್ ಕುಮಾರ್ ಪೊಲಿಪು ಉಪಸ್ಥಿತರಿದ್ದರು.

ತುಳುಕೂಟ ಉಡುಪಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಎಂಜಿಎಂ ಕಾಲೇಜಿನ ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ನಾಟಕ ಸ್ಪರ್ಧೆಯ ಸಂಚಾಲಕ ಬಿ.ಪ್ರಭಾಕರ ಭಂಡಾರಿ ವಂದಿಸಿದರು. ಬಳಿಕ ಮಂಗಳೂರಿನ ಜರ್ನಿ ಥಿಯೇಟರ್ ಗ್ರೂಪ್‌ನಿಂದ ‘ಆದಿ ಅಳವುದ ಸಾದಿ’ ನಾಟಕ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News