"ಹೇಡಿಗಳಿಂದ ಈ ಯುದ್ಧ ಜಯಿಸಲು ಸಾಧ್ಯವಿಲ್ಲ": ಆರ್‌ಪಿಎನ್‌ ಸಿಂಗ್‌ ರಾಜೀನಾಮೆ ಬಳಿಕ ಕಾಂಗ್ರೆಸ್‌ ಹೇಳಿಕೆ

Update: 2022-01-25 13:05 GMT

ಹೊಸದಿಲ್ಲಿ: ಉತ್ತರಪ್ರದೇಶ ಕಾಂಗ್ರೆಸ್‌ ನ ಹಿರಿಯ ನಾಯಕರಾಗಿದ್ದ ಆರ್‌ಪಿಎನ್‌ ಸಿಂಗ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ, ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಾತುಗಳಲ್ಲಿ ಕಾಂಗ್ರೆಸ್‌ ತನ್ನ ತೀಕ್ಷ್ಣ ಸಂದೇಶವನ್ನು ರವಾನಿಸಿದೆ.

"ಕಾಂಗ್ರೆಸ್ ದೇಶಾದ್ಯಂತ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ನಡೆಸುತ್ತಿರುವ ಹೋರಾಟವು ಸರ್ಕಾರಿ ಸಂಪನ್ಮೂಲಗಳು, ಅದರ ಏಜೆನ್ಸಿಗಳ ವಿರುದ್ಧದ ಹೋರಾಟವಾಗಿದೆ. ಇದು ಸಿದ್ಧಾಂತ, ಸತ್ಯದ ಹೋರಾಟ ಮತ್ತು ಈ ಹೋರಾಟದಂತೆಯೇ ಪ್ರಬಲವಾದ ಹೋರಾಟವನ್ನು ನಾವು ನೀವೆಲ್ಲಾ ಹೋರಾಡಬೇಕು. ಧೈರ್ಯ ಮತ್ತು ಸಮರ್ಪಣಾ ಭಾವ ಅವಶ್ಯಕವಿರುವ ಈ ಹೋರಾಟವು ಹೇಡಿಗಳಿಗೆ ತಕ್ಕುದಲ್ಲ" ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾಟೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದಂತೆ, ಈ ಯುದ್ಧವನ್ನು ಹೋರಾಡಲು ನೀವು ನಿಮ್ಮ ಕಾಲ ಬೆರಳುಗಳ ಮೇಲೆ ನಿಂತಿರಬೇಕು, ನಿಮಗೆ ಧೈರ್ಯ ಬೇಕು, ನೀವು ಹೇಡಿಯಾಗಿರಲು ಸಾಧ್ಯವಿಲ್ಲ ಒಂದು ವೇಳೆ ಹೇಡಿಯಾಗಿದ್ದರೆ ಈ ಯುದ್ಧದಲ್ಲಿ ಹೋರಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಪ್ರಚಾರವನ್ನು ಮುನ್ನಡೆಸುತ್ತಿದ್ದಾರೆ. ಅವರು 2019 ರಲ್ಲಿ ಪಕ್ಷದ ಉತ್ತರಪ್ರದೇಶ ರಾಜ್ಯದ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಅವರು ರಾಜ್ಯದಲ್ಲಿ ಮೂವರು ಹಿರಿಯ ನಾಯಕರನ್ನು ಕಳೆದುಕೊಂಡಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ ಅವರು 2019 ರ ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಜೊತೆಗೆ ಯುಪಿ ಉಸ್ತುವಾರಿ ವಹಿಸಿದ್ದರು. ಆದರೆ ಅದರ ಮುಂದಿನ ವರ್ಷ ಅವರು ಪಕ್ಷವನ್ನು ತೊರೆದಿದ್ದು, ಮಧ್ಯಪ್ರದೇಶದ ಅನೇಕ ಶಾಸಕರನ್ನು ತಮ್ಮೊಂದಿಗೆ ಕರೆದೊಯ್ದಿದ್ದರು. ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕುಸಿದಿತ್ತು.

ಕಳೆದ ವರ್ಷ, ಉತ್ತರಪ್ರದೇಶದಲ್ಲಿ ಪಕ್ಷದ ಪ್ರಮುಖ ಬ್ರಾಹ್ಮಣ ಮುಖವಾಗಿದ್ದ ಜಿತಿನ್ ಪ್ರಸಾದ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News