ಭ್ರಷ್ಟಾಚಾರ ಸೂಚ್ಯಂಕದಲ್ಲಿ ಕುಸಿದ ಪಾಕಿಸ್ತಾನ; ಇಮ್ರಾನ್‌ ಖಾನ್‌ ʼಭ್ರಷ್ಟಾಚಾರದ ರಾಜʼ ಎಂದ ನಾಗರಿಕರು !

Update: 2022-01-25 16:49 GMT
ಪಾಕ್ ಪ್ರಧಾನಿ ಇಮ್ರಾನ್ ಖಾನ್‌ 

ನ್ಯೂಯಾರ್ಕ್, ಜ.25: ಟ್ರಾನ್ಸ್‌ಪರೆನ್ಸಿ ಇಂಟರ್ನ್ಯಾಷನಲ್ ನ ಇತ್ತೀಚಿನ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಾಂಕ(ಸಿಪಿಎಲ್ 2021) ಪ್ರಕಾರ 180 ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ 140ನೇ ಸ್ಥಾನಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ತಾಣದಲ್ಲಿ ಪಾಕ್‌ ನಾಗರಿಕರು ಇಮ್ರಾನ್‌ ಖಾನ್‌ ರನ್ನು ʼಭ್ರಷ್ಟಾಚಾರದ ರಾಜʼ ಎಂದು ಕರೆದು ವ್ಯಂಗ್ಯಭರಿತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವದಾದ್ಯಂತದ ದೇಶಗಳನ್ನು ಸಾರ್ವಜನಿಕ ವಲಯದ ಭ್ರಷ್ಟಾಚಾರದ ಗ್ರಹಿಕೆಯನ್ನು ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ. ಇಲ್ಲಿ 0ಯಿಂದ 100ರವರೆಗೆ ಅಂಕ ನೀಡಲಾಗುತ್ತದೆ. 0 ಎಂದರೆ ಅತ್ಯಧಿಕ ಭ್ರಷ್ಟಾಚಾರ ಮತ್ತು 100 ಎಂದರೆ ಅತ್ಯಂತ ಸ್ವಚ್ಛ ಎಂದು ಗ್ರಹಿಸಲಾಗಿದೆ. ಪಾಕಿಸ್ತಾನಕ್ಕೆ 100ರಲ್ಲಿ 28 ಅಂಕ ದೊರತಿದ್ದು ಇಷ್ಟೇ ಅಂಕ ಪಡೆದಿರುವ ಮ್ಯಾನ್ಮಾರ್‌ನೊಂದಿಗೆ ಜಂಟಿಯಾಗಿ 140ನೇ ಸ್ಥಾನದಲ್ಲಿದೆ. ಡೆನ್ಮಾರ್ಕ್, ಫಿನ್ಲ್ಯಾಂಡ್ ಮತ್ತು ನ್ಯೂಜಿಲ್ಯಾಂಡ್ 88 ಅಂಕಗಳೊಂದಿಗೆ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದರೆ, ನಾರ್ವೆ, ಸಿಂಗಾಪುರ ಮತ್ತು ಸ್ವೀಡನ್ 85 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಅಗ್ರ 10 ಸ್ವಚ್ಛ ದೇಶಗಳ ಪಟ್ಟಿಯಲ್ಲಿ ಸ್ವಿಝರ್ಲಾಂಡ್, ನೆದರ್ಲ್ಯಾಂಡ್, ಲುಕ್ಸೆಂಬರ್ಗ್ ಮತ್ತು ಜರ್ಮನಿ ಸ್ಥಾನಪಡೆದಿದ್ದರೆ ಬ್ರಿಟನ್ 78 ಅಂಕಗಳೊಂದಿಗೆ 11, ಹಾಂಕಾಂಗ್ 76 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿದೆ. ವಿಶ್ವದೆಲ್ಲೆಡೆ ಭ್ರಷ್ಟಾಚಾರ ಪ್ರಕರಣ ಸ್ಥಿರವಾಗಿರುವಂತೆಯೇ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವೂ ಆಕ್ರಮಣಕ್ಕೆ ಒಳಗಾಗಿದೆ. ಪ್ರಮುಖ ಮೂಲಭೂತ ಸ್ವಾತಂತ್ರ್ಯದ ಉಲ್ಲಂಘನೆಗೆ ಹಲವು ದೇಶಗಳು ಕೋವಿಡ್ ಸೋಂಕನ್ನು ನೆಪವಾಗಿಸಿಕೊಂಡಿವೆ . ಕಳೆದ ದಶಕದಲ್ಲಿ 131 ದೇಶಗಳು ಭ್ರಷ್ಟಾಚಾರದ ವಿರುದ್ಧ ಗಮನಾರ್ಹ ಪ್ರಗತಿ ಸಾಧಿಸಿಲ್ಲ ಮತ್ತು ಮೂರನೇ ಎರಡರಷ್ಟು ದೇಶಗಳು 50ಕ್ಕೂ ಕಡಿಮೆ ಅಂಕ ಗಳಿಸುವ ಮೂಲಕ ಗಂಭೀರ ಭ್ರಷ್ಟಾಚಾರ ಸಮಸ್ಯೆ ಇರುವುದನ್ನು ಸೂಚಿಸಿವೆ ಎಂದು ವರದಿ ಹೇಳಿದೆ.

ಅಮೆರಿಕ 67 ಅಂಕಗಳೊಂದಿಗೆ 27ನೇ ಸ್ಥಾನ, ಭಾರತ 40 ಅಂಕಗಳೊಂದಿಗೆ 85ನೇ ಸ್ಥಾನ ಗಳಿಸಿದ್ದು ಕಳೆದ ವರ್ಷವೂ ಇದೇ ಸ್ಥಾನದಲ್ಲಿತ್ತು. ಮಾಲ್ದೀವ್ಸ್ ಕೂಡಾ 85ನೇ ಸ್ಥಾನ ಪಡೆದಿದೆ. ಬಾಂಗ್ಲಾದೇಶ 26 ಅಂಕಗಳೊಂದಿಗೆ 147ನೇ ಸ್ಥಾನ, ಶ್ರೀಲಂಕಾ 37 ಅಂಕಗಳೊಂದಿಗೆ 102ನೇ ಸ್ಥಾನದಲ್ಲಿದೆ. ಇರಾನ್, ತಜಿಕಿಸ್ತಾನ ಮತ್ತು ಗ್ವಾಟೆಮಾಲಾ 150ನೇ ಸ್ಥಾನದಲ್ಲಿದೆ.

ಅಫ್ಘಾನಿಸ್ತಾನವು ಅತ್ಯಂತ ಭ್ರಷ್ಟ ದೇಶಗಳ ವಿಭಾಗದಲ್ಲಿದ್ದು 16 ಅಂಕಗಳೊಂದಿಗೆ 174ನೇ ಸ್ಥಾನದಲ್ಲಿದೆ. ಉತ್ತರ ಕೊರಿಯಾ ಮತ್ತು ಯೆಮನ್ ಕೂಡಾ ಇಷ್ಟೇ ಅಂಕಗಳಿಸಿವೆ. ಸೊಮಾಲಿಯಾ ಮತ್ತು ಸಿರಿಯಾ 178ನೇ ಸ್ಥಾನದಲ್ಲಿದ್ದರೆ ದಕ್ಷಿಣ ಸುಡಾನ್ ಅಂತಿಮ (180ನೇ) ಸ್ಥಾನ ಪಡೆದಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News