ಉಡುಪಿ ಸ್ಕಾರ್ಫ್ ವಿವಾದ; ಹಿಜಾಬ್ ಹಾಕದೆ ಬರಲು ಒಪ್ಪದ ವಿದ್ಯಾರ್ಥಿನಿಯರಿಗೆ ಆನ್‌ಲೈನ್ ತರಗತಿ: ಶಾಸಕ ರಘುಪತಿ ಭಟ್

Update: 2022-01-26 06:23 GMT
ಶಾಸಕ ರಘುಪತಿ ಭಟ್

ಉಡುಪಿ, ಜ.26: ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಹಾಕದೆ ತರಗತಿಗೆ ಹಾಜರಾಗುವಂತೆ ಮನವಿ ಮಾಡಲಾಗುವುದು. ಇದಕ್ಕೆ ಒಪ್ಪದಿದ್ದರೆ ಅವರಿಗೆ ಆನ್‌ಲೈನ್ ತರಗತಿ ಮಾಡಿ ಪರೀಕ್ಷೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗುವುದು ಎಂದು ಉಡುಪಿ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಕಾರ್ಫ್ ವಿಚಾರವಾಗಿ ಸರಕಾರ ಯಥಾಸ್ಥಿತಿ ಕಾಪಾಡುವಂತೆ ಹೊರಡಿಸಿದ ಆದೇಶ ಸಂಬಂಧ ಮಂಗಳವಾರ ಕಾಲೇಜು ಅಭಿವೃದ್ಧಿ ಸಮಿತಿ ನಡೆಸಿದ ಸಭೆಯ ಬಳಿಕ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವ ನೇತೃತ್ವದಲ್ಲಿ ಮುಸ್ಲಿಮ್ ಮುಖಂಡರು ಭೇಟಿ ಮಾಡಿ ಚರ್ಚಿಸಿದ್ದರು. ಆ ಬಳಿಕ ಕಾಲೇಜು ಅಭಿವೃದ್ಧಿ ಸಮಿತಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.

ಸ್ಕಾರ್ಫ್ ಹಾಕಲು ಒಂದು ಕಾಲೇಜಿನಲ್ಲಿ ಅವಕಾಶ ನೀಡಿದರೆ ಮುಂದೆ ಎಲ್ಲ ಕಾಲೇಜಿನಲ್ಲಿ ಇದು ಆರಂಭವಾಗುತ್ತದೆ. ಬಳಿಕ ಇದಕ್ಕೆ ಪ್ರತಿರೋಧವಾಗಿ ಕೇಸರಿ ಶಾಲು, ಕೇಸರಿ ಪೇಟ ಧರಿಸಿಕೊಂಡು ಬರುವ ವಿವಾದವೂ ಎದುರಾಗುತ್ತದೆ. ಜಿಲ್ಲೆಯ ಕೋಮು ಸೌಹಾರ್ದತೆಕ್ಕೆ ಈ ಸಣ್ಣ ವಿಚಾರದಿಂದ ಧಕ್ಕೆಯಾಗದಂತೆ ಮುಖಂಡರಿಗೆ ಮನವಿ ಮಾಡಿದ್ದೇವೆ. ಅವರು ಪೋಷಕರೊಂದಿಗೆ ಮಾತನಾಡಿ ಎರಡು ದಿನಗಳಲ್ಲಿ ಮತ್ತೆ ನಮ್ಮನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದರು.

ಈ ಆರು ಮಕ್ಕಳ ಪೋಷಕರನ್ನು ಪ್ರಾಂಶುಪಾಲರು ಕರೆದು, ಹಿಜಾಬ್ ಧರಿಸದೆ ತರಗತಿ ಬರುವಂತೆ ಮನವಿ ಮಾಡಲಿದ್ದಾರೆ. ಈಗಾಗಲೇ ಒಂದೂವರೆ ವರ್ಷ ಹಿಜಾಬ್ ಇಲ್ಲದೆ ಇವರು ತರಗತಿಗೆ ಬಂದಿದ್ದಾರೆ. ಇನ್ನೂ ಕೇವಲ ಒಂದು ತಿಂಗಳು ಮಾತ್ರ ತರಗತಿ ಇರುತ್ತದೆ. ಆ ನಂತರ ಪರೀಕ್ಷೆ ನಡೆಯುತ್ತದೆ. ಒಂದು ವೇಳೆ ವಿದ್ಯಾರ್ಥಿನಿಯರು ಹಾಗೂ ಪೋಷಕರು ಹಿಜಾಬ್ ಇಲ್ಲದೆ ಬರಲು ಒಪ್ಪದಿದ್ದರೆ ನಾವು ತರಗತಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಅವರಿಗೆ ಬೇಕಾದರೆ ಆನ್‌ಲೈನ್ ತರಗತಿ ಮಾಡಿ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗುವುದು. ಮುಂದಿನ ವರ್ಷ ಯಾವ ಕಾಲೇಜಿಗೆ ಬೇಕಾದರೂ ಅವರು ಸೇರಿಕೊಳ್ಳಬಹುದು ಎಂದು ತಿಳಿಸಿದರು.

ಯಾರದ್ದೋ ಕುಮ್ಮಕ್ಕಿನಿಂದ ಪೋಷಕರು ಮಕ್ಕಳ ಭವಿಷ್ಯ ಹಾಳು ಮಾಡುವುದು ಸರಿಯಲ್ಲ. ಕಾಲೇಜಿನಲ್ಲಿ ಶಿಸ್ತು ಎಂಬುದು ಅತಿ ಅಗತ್ಯ. ಹಾಗಾಗಿ ಕಾಲೇಜು ಮತ್ತು ಮಕ್ಕಳ ಭವಿಷ್ಯದ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳಿಗೆ ತಿಳಿಹೇಳಿ ಹಿಂದೆ ಇದ್ದ ಪದ್ಧತಿ ಮುಂದುವರೆಸಲು ಅವಕಾಶ ಕಲ್ಪಿಸಬೇಕು. ನಾವು ಯಾವುದೇ ಕಾರಣಕ್ಕೂ ಆ ಪದ್ಧತಿಯನ್ನು ಬದಲಾಯಿಸುವುದಿಲ್ಲ ಎಂದು ರಘುಪತಿ ಭಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News