73ನೇ ಗಣರಾಜ್ಯೋತ್ಸವ ಪರೇಡ್ ನ 10 ಮುಖ್ಯಾಂಶಗಳು ಹೀಗಿವೆ...

Update: 2022-01-26 15:58 GMT
photo:PTI

ಹೊಸದಿಲ್ಲಿ,ಜ.26: ರಾಜಪಥ್‌ನಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯು ಸಾಂಪ್ರದಾಯಿಕ ಪರೇಡ್‌ನೊಂದಿಗೆ ಆರಂಭಗೊಂಡಿತು ಮತ್ತು 75 ವಿಮಾನಗಳ ಅದ್ಭುತ ಸ್ಕೈಪಾಸ್ಟ್ ನೊಂದಿಗೆ ಅಂತ್ಯಗೊಂಡಿತು. ಭಾರತದ ಎಲ್ಲ ಮುಖಗಳು ಮತ್ತು ಸಂಸ್ಕೃತಿಗಳನ್ನು ಪ್ರದರ್ಶಿಸಲಾಗಿದ್ದು, ಕೋವಿಡ್ ಸಾಂಕ್ರಾಮಿಕದಿಂದಾಗಿ ವೀಕ್ಷಕರ ಸಂಖ್ಯೆಯನ್ನು ಕೇವಲ 5,000ಕ್ಕೆ ಸೀಮಿತಗೊಳಿಸಲಾಗಿತ್ತು.

ಪರೇಡ್ ನ ಮುಖ್ಯಾಂಶಗಳು

75 ವಿಮಾನಗಳ ಭವ್ಯ ಫ್ಲೈಪಾಸ್ಟ್ ಭಾರತೀಯ ವಾಯುಪಡೆಯು ಇತ್ತೀಚಿಗೆ ಖರೀದಿಸಿರುವ ರಫೇಲ್ ಯುದ್ಧವಿಮಾನಗಳು ಮತ್ತು ಚಿನೂಕ್ ಹೆಲಿಕಾಪ್ಟರ್‌ಗಳನ್ನು ಒಳಗೊಂಡಿತ್ತು.

ಇದೇ ಮೊದಲ ಬಾರಿಗೆ ಈ ಮೊದಲು ರೆಕಾರ್ಡ್ ಮಾಡಲಾದ ಬೆರಗು ಮೂಡಿಸುವ ಇನ್-ಫ್ಲೈಟ್ ಕಾಕ್ಪಿಟ್ ವೀಡಿಯೊವನ್ನು ಬಿಡುಗಡೆಗೊಳಿಸಲಾಯಿತು.

ದುರದೃಷ್ಟವಶಾತ್ ಮೋಡಗಳ ಅಡ್ಡಿಯಿಂದಾಗಿ ಫ್ಲೈಪಾಸ್ಟ್‌ನ ವೈಭವೋಪೇತ ಮುಕ್ತಾಯವಾಗಿದ್ದ 17 ಜಾಗ್ವಾರ್ ವಿಮಾನಗಳು ಆಗಸದಲ್ಲಿ ರೂಪಿಸಿದ್ದ ರಚನೆಯು ರಾಜಪಥದಲ್ಲಿ ಗೋಚರವಾಗಲಿಲ್ಲ.

ರಫೇಲ್ ವಿಮಾನಗಳ ದೇಶದ ಮೊದಲ ಮಹಿಳಾ ಪೈಲಟ್ ಫ್ಲೈಟ್ ಲೆಫಿನಂಟ್ ಶಿವಾಂಗಿ ಸಿಂಗ್ ಅವರು ಭಾರತೀಯ ವಾಯುಪಡೆಯು ಭವಿಷ್ಯಕ್ಕಾಗಿ ರೂಪಾಂತರಗೊಳ್ಳುತ್ತಿದೆ ಎಂಬ ವಿಷಯವನ್ನು ಆಧರಿಸಿದ್ದ ಸ್ತಬ್ಧಚಿತ್ರದಲ್ಲಿ ಉಪಸ್ಥಿತರಿದ್ದರು.

ಅತಿ ವಿಶಿಷ್ಟ ಸೇವಾ ಪದಕ ಪುರಸ್ಕೃತ ಲೆ.ಜ.ವಿಜಯ ಕುಮಾರ ಮಿಶ್ರಾ ಅವರು ಸೇನಾ ಪರೇಡ್ ನ ನೇತೃತ್ವವನ್ನು ವಹಿಸಿದ್ದರು.

ಭಾರತೀಯ ಸೇನೆಯ ಪರೇಡ್‌ನಲ್ಲಿಯ ತುಕಡಿಗಳಲ್ಲಿ ನೂತನ ಯುದ್ಧ ಸಮವಸ್ತ್ರದಲ್ಲಿದ್ದ ಪ್ಯಾರಾಟ್ರೂಪರ್‌ಗಳು ಸೇರಿದ್ದರು. ಸೆಂಟ್ರಲ್ ವಿಸ್ತಾ ಕಡೆಯಿಂದ ಆಗಮಿಸಿದ ಅವರನ್ನು ಭರ್ಜರಿ ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.

ಸ್ವಾತಂತ್ರಾನಂತರದ ದಶಕಗಳಲ್ಲಿ ಭಾರತೀಯ ಸೇನಾಪಡೆಯ ಸಮವಸ್ತ್ರಗಳು ಮತ್ತು ರೈಫಲ್‌ಗಳು ಹೇಗೆ ವಿಕಸನಗೊಂಡಿವೆ ಎನ್ನುವುದನ್ನು ಪರೇಡ್‌ನಲ್ಲಿ ಪ್ರದರ್ಶಿಸಲಾಗಿತ್ತು. ಮೂರು ತುಕಡಿಗಳು ಹಿಂದಿನ ದಶಕಗಳ ಮತ್ತು ಒಂದು ತುಕಡಿ ನೂತನ ಸಮವಸ್ತ್ರಗಳನ್ನು ಧರಿಸಿದ್ದವು.

ಸಿಆರ್‌ಪಿಎಫ್ ಸಿಬ್ಬಂದಿಗಳು ತಮ್ಮ ಧ್ಯೇಯಗೀತೆಯನ್ನು ಹಾಡುತ್ತ ನೀಡಿದ ಪ್ರದರ್ಶನ ಸಶಸ್ತ್ರ ಪಡೆಗಳ ಅತ್ಯಂತ ವರ್ಣರಂಜಿತ ಪ್ರದರ್ಶನಗಳಲ್ಲೊಂದಾಗಿತ್ತು.ಆಗಸ ಮತ್ತು ನೆಲದಲ್ಲಿನ ಪ್ರದರ್ಶನಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಉಡುಪು ಸಹ ಗಮನವನ್ನು ಸೆಳೆದಿತ್ತು. ಉತ್ತರಾಖಂಡದ ಟೊಪ್ಪಿಗೆ ಮತ್ತು ಮಣಿಪುರದ ಕಂಠವಸ್ತ್ರವನ್ನು ಅವರು ಧರಿಸಿದ್ದರು. ಇವೆರಡೂ ರಾಜ್ಯಗಳು ವಿಧಾನಸಭಾ ಚುನಾವಣೆಗಳಿಗೆ ಸಜ್ಜಾಗಿವೆ.

ಭಾವನಾತ್ಮಕ ವಿದಾಯಕ್ಕೂ ಗಣರಾಜ್ಯೋತ್ಸವ ದಿನವು ಸಾಕ್ಷಿಯಾಗಿತ್ತು. ರಾಷ್ಟ್ರಪತಿಗಳ ಅಂಗರಕ್ಷಣಾ ದಳದ,10 ಗಣರಾಜ್ಯೋತ್ಸವ ಪರೇಡ್‌ಗಳಲ್ಲಿ ಭಾಗವಹಿಸಿದ್ದ ಅಶ್ವ ‘ಚಾರ್ಜರ್’ ವಿರಾಟ್ ಕೊನೆಯ ಬಾರಿಗೆ ರಾಷ್ಟ್ರಪತಿಗಳಿಗೆ ಬೆಂಗಾವಲು ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News