"ತೃತೀಯ ಭಾಷೆಯಾಗಿ ಹಿಂದಿ ಕಲಿಸುವುದು ಹಾನಿಕರವಲ್ಲ": ತಮಿಳುನಾಡು ಸರಕಾರಕ್ಕೆ ತಿಳಿಸಿದ ಮದ್ರಾಸ್ ಹೈಕೋರ್ಟ್

Update: 2022-01-26 16:30 GMT

ಚೆನ್ನೈ , ಜ. 26: ತಮಿಳುನಾಡಿನಲ್ಲಿ ತಮಿಳು, ಇಂಗ್ಲೀಷ್ ನೊಂದಿಗೆ ಹಿಂದಿಯನ್ನು ತೃತೀಯ ಭಾಷೆಯಾಗಿ ಕಲಿಸುವುದರಿಂದ ವಿದ್ಯಾರ್ಥಿಗಳಿಗೆ ಹಾನಿಯಾಗುವುದಿಲ್ಲ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಮಂಗಳವಾರ ಹೇಳಿದೆ. 

ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಕುರಿತ ಮನವಿಯ ವಿಚಾರಣೆ ನಡೆಸಿದ ಸಂದರ್ಭ ಮುಖ್ಯ ನ್ಯಾಯಮೂರ್ತಿ ಎಂ.ಎನ್. ಭಂಡಾರಿ ಹಾಗೂ ನ್ಯಾಯಮೂರ್ತಿ ಪಿ.ಡಿ. ಆದಿಕೇಶವಲು ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯಬೇಕು. ಅದರಲ್ಲಿ ಎರಡು ಭಾರತದಲ್ಲಿ ಹುಟ್ಟಿದ ಭಾಷೆಯಾಗಿರಬೇಕು ಎಂದು ಶಿಕ್ಷಣ ನೀತಿ ಶಿಫಾರಸು ಮಾಡಿದೆ. ಇದು ದೇಶಾದ್ಯಂತ ಹಿಂದಿ ಹಾಗೂ ಸಂಸ್ಕೃತವನ್ನು ಹೇರುವ ಪ್ರಯತ್ನ ಎಂದು ಹೇಳುವ ಮೂಲಕ ತಮಿಳುನಾಡು ಸರಕಾರ ಟೀಕಿಸಿತ್ತು. ಲಾಭದ ಉದ್ದೇಶ ರಹಿತ ಸಂಸ್ಥೆ ಅಲಾಮರಂನ ಕಾರ್ಯದರ್ಶಿ ಅರ್ಜುನನ್ ಇಳಯರಾಜ ಅವರು ಸಲ್ಲಿಸಿದ ದೂರಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಂತೆ ಹಿಂದಿ ಹಾಗೂ ಸಂಸ್ಕೃತಕ್ಕೆ ಪ್ರೇರಣೆ ನೀಡುವುದನ್ನು ತಮಿಳುನಾಡು ನಿರ್ಬಂಧಿಸಬಾರದು ಎಂದಿದೆ. ಮನವಿಯನ್ನು ಮಂಗಳವಾರ ವಿಚಾರಣೆಗೆ ಪರಿಗಣಿಸಿದ ಬಳಿಕ ನ್ಯಾಯಾಲಯ, ಭಾಷಾ ಕಲಿಕೆಯನ್ನು ನಿರ್ಬಂಧಿಸುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ಮಿತಿ ಉಂಟಾಗಬಹುದು ಎಂದು ಹೇಳಿತು. 

‘‘ತಮಿಳುನಾಡಿನವರು ಇಲ್ಲಿ ಉದ್ಯೋಗ ಪಡೆಯಲು ಯಾವುದೇ ಕಷ್ಟ ಇಲ್ಲ. ಯಾಕೆಂದರೆ, ಅವರು ತಮಿಳು ಭಾಷೆಯಲ್ಲಿ ಮಾತನಾಡಲು ಪರಿಣಿತರು. ಆದರೆ, ಅವರು ರಾಜ್ಯದ ಹೊರಗೆ ಕಷ್ಟ ಎದುರಿಸುತ್ತಾರೆ’’ ಎಂದು ಭಂಡಾರಿ ಹೇಳಿದ್ದಾರೆ. ಹಿಂದಿ ತಿಳಿಯದೇ ಇರುವುದರಿಂದ ಹಲವರು ಕೇಂದ್ರ ಸರಕಾರದ ಉದ್ಯೋಗವನ್ನು ಕಳೆದು ಕೊಂಡಿದ್ದಾರೆ ಎಂದು ಅವರು ಗಮನ ಸೆಳೆದರು. ತಮಿಳುನಾಡು ಸರಕಾರವನ್ನು ಪ್ರತಿನಿಧಿಸಿದ ನ್ಯಾಯವಾದಿ ಆರ್. ಶಣ್ಮುಗಸುಂದರಂ, ರಾಜ್ಯ ದ್ವಿಭಾಷಾ ನೀತಿ ಅನುಸರಿಸುತ್ತಿದೆ ಎಂದು ತಿಳಿಸಿದರು. ಅಲ್ಲದೆ, ತೃತೀಯ ಭಾಷೆ ವಿದ್ಯಾರ್ಥಿಗಳಿಗೆ ತೀವ್ರ ಹೊರೆ ಆಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News