×
Ad

ಉತ್ತರಾಖಂಡದ ಮಾಜಿ ಕಾಂಗ್ರೆಸ್ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಬಿಜೆಪಿಗೆ ಸೇರ್ಪಡೆ

Update: 2022-01-27 13:40 IST

ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಕಾಂಗ್ರೆಸ್ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಅವರು ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಕಿಶೋರ್ ಅವರು ಕೇಂದ್ರ ಸಚಿವರು ಹಾಗೂ  ಪಕ್ಷದ ಉತ್ತರಾಖಂಡದ ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಶಿ ಹಾಗೂ  ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಮಾಧ್ಯಮ ವರದಿಗಳ ಪ್ರಕಾರ, ತೆಹ್ರಿ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಇನ್ನೂ ಘೋಷಿಸದ ಬಿಜೆಪಿ ಅಲ್ಲಿಂದ ಉಪಾಧ್ಯಾಯರನ್ನು ಕಣಕ್ಕಿಳಿಸಬಹುದು.

ಉಪಾಧ್ಯಾಯ ಅವರು 2002 ಮತ್ತು 2007 ರ ಚುನಾವಣೆಯಲ್ಲಿ ತೆಹ್ರಿ ಸ್ಥಾನವನ್ನು ಗೆದ್ದಿದ್ದರು.

'ಪಕ್ಷ ವಿರೋಧಿ' ಚಟುವಟಿಕೆಗಳಿಗಾಗಿ ಕಾಂಗ್ರೆಸ್ ಪಕ್ಷವು ಉಪಾಧ್ಯಾಯ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.

ನರೇಂದ್ರ ನಗರದ ಮಾಜಿ ಬಿಜೆಪಿ ಶಾಸಕ ಓಂ ಗೋಪಾಲ್ ರಾವತ್ ಬುಧವಾರ ಇಲ್ಲಿ ತಮ್ಮ ಬೆಂಬಲಿಗರೊಂದಿಗೆ ರಾಜ್ಯ ಪಕ್ಷದ ಅಧ್ಯಕ್ಷ ಗಣೇಶ್ ಗೋಡಿಯಾಲ್ ಹಾಗೂ  ಇತರ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ನಂತರ ಈ ಬೆಳವಣಿಗೆ ನಡೆದಿದೆ.

ರಾವತ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿರುವ ಗೋಡಿಯಾಲ್, ರಾವತ್ ಅವರ ಸೇರ್ಪಡೆಯು ಕಾಂಗ್ರೆಸ್ ಅನ್ನು ಬಲಪಡಿಸುತ್ತದೆ ಎಂದು ಹೇಳಿದರು.

ಹಾಲಿ ಶಾಸಕ ಹಾಗೂ  ಕ್ಯಾಬಿನೆಟ್ ಸಚಿವ ಸುಬೋಧ್ ಉನಿಯಾಲ್ ಅವರನ್ನು ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಸಿರುವ ನರೇಂದ್ರ ನಗರ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಓಂ ಗೋಪಾಲ್ ರಾವತ್ ನಿರಾಶೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News