ತಮಿಳುನಾಡು ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

Update: 2022-01-27 10:47 GMT
Photo: Twitter

ಚೆನ್ನೈ: ತಮಿಳುನಾಡಿನ 17 ವರ್ಷದ ಶಾಲಾ ಬಾಲಕಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ವೀಡಿಯೋವೊಂದು ಹರಿದಾಡುತ್ತಿದ್ದು ಅದರಲ್ಲಿ ಆಕೆ ತನಗೆ ಕಡಿಮೆ ಅಂಕಗಳು ದೊರೆಯಬಹುದೆಂದು ಭೀತಿಯಿಂದ 'ವಿಷ ಸೇವಿಸಿರುವುದಾಗಿʼ ಹೇಳುವುದು ಕೇಳಿಸುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಈ ಪ್ರಕರಣವನ್ನು ಬಲವಂತದ ಮತಾಂತರ ಎಂದು ಬಿಂಬಿಸಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ಬಂಧಿಸಬೇಕೆಂದು ಟ್ವಿಟರ್‌ ನಲ್ಲಿ #arrestannamalai ಎಂಬ ಹ್ಯಾಶ್‌ಟ್ಯಾಗ್‌ ಮೂಲಕ ನೆಟ್ಟಿಗರು ಆಗ್ರಹಿಸಿದ್ದಾರೆ.

ಕಲಿಕೆಯಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ, ಹಾಸ್ಟೆಲ್ ವಾರ್ಡನ್ ತನಗೆ ಹಾಸ್ಟೆಲ್ ಶುಚಿಗೊಳಿಸುವುದು, ಲೆಕ್ಕಪತ್ರ ನೋಡಿಕೊಳ್ಳುವುದು ಹೀಗೆ ಬೇರೆ ಕೆಲಸ ವಹಿಸಿದ್ದರು ಎಂದು ಆಕೆ ಹೇಳುವುದು ಕೇಳಿಸುತ್ತದೆ. ಈ ವೀಡಿಯೋದ ಸತ್ಯಾಸತ್ಯತೆ ದೃಢಪಟ್ಟಿಲ್ಲ.

ಇದಕ್ಕೂ ಮುಂಚೆ ಹರಿದಾಡಿದ ಇನ್ನೊಂದು ವೀಡಿಯೋದಲ್ಲಿ ಆಕೆ ತನ್ನ ಹಾಸ್ಟೆಲ್ ವಾರ್ಡನ್ ತನ್ನನ್ನು ನಿಂದಿಸಿದ್ದಾರೆ ಹಾಗೂ ತನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೈಯ್ಯುವ ಯತ್ನದ ಬಗ್ಗೆ ಮಾತನಾಡಿದ್ದಳು.

ಆಕೆಯ ಹೆತ್ತವರ ಹೇಳಿಕೆಯನ್ನು ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್‍ನ ಮಧುರೈ ಪೀಠ ಆದೇಶಿಸಿದೆ. ಆಕೆಯ ಹೇಳಿಕೆ ಕುರಿತ ವೀಡಿಯೋ ಚಿತ್ರೀಕರಿಸಿದ ವ್ಯಕ್ತಿ ತನ್ನ ಫೋನ್ ಅನ್ನು ಫೊರೆನ್ಸಿಕ್ ತಪಾಸಣೆಗೆ ಹಾಜರುಪಡಿಸಬೇಕೆಂದೂ ನ್ಯಾಯಾಲಯ ಸೂಚಿಸಿದೆ. ಈಗ ಆ ಫೋನ್ ಪೊಲೀಸರ ವಶದಲ್ಲಿದೆ.

ಹುಡುಗಿಯ ಹೇಳಿಕೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ವ್ಯಕ್ತಿಗೆ ಯಾವುದೇ ಕಿರುಕುಳ ನೀಡದಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆಯಲ್ಲದೆ ಬದಲು ಆಕೆಯ ಆತ್ಮಹತ್ಯೆಗೆ ಕಾರಣಗಳೇನು ಎಂಬ ಕುರಿತು ತನಿಖೆಗೆ ಒತ್ತು ನೀಡುವಂತೆ ಸೂಚಿಸಿದೆ.

ಬಾಲಕಿ ಜನವರಿ 9ರಂದು ತಂಜಾವೂರಿನ ತನ್ನ ನಿವಾಸದಲ್ಲಿ ವಿಷ ಸೇವಿಸಿದ್ದರೆ, ಹತ್ತು ದಿನಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಘಟನೆ ಸಂಬಂಧ ಹಾಸ್ಟೆಲ್ ವಾರ್ಡನ್‍ನನ್ನು ಬಂಧಿಸಲಾಗಿದೆ. ಆದರೆ ಪ್ರಕರಣವನ್ನು ಬಲವಂತದ ಮತಾಂತರದ ಕಾರಣ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು ಎಂಬಂತೆ ತಮಿಳುನಾಡು ಬಿಜೆಪಿ ಬಿಂಬಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News