ಪಾಕ್‌ ಜಯ ಸಂಭ್ರಮಿಸಿದ್ದಕ್ಕೆ 4 ತಿಂಗಳಿನಿಂದ ಜೈಲಿನಲ್ಲಿರುವ 3 ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹ ಆರೋಪ

Update: 2022-01-27 11:25 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕಳೆದ ವರ್ಷ ಟಿ-20 ವಿಶ್ವ ಕಪ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಲ್ಲಿ ಭಾರತ ತಂಡದೆದುರು ಪಾಕಿಸ್ತಾನದ ವಿಜಯವನ್ನು ಆಚರಿಸಿದ್ದಕ್ಕಾಗಿ ಬಂಧಿತರಾಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ದೇಶದ್ರೋಹ ಆರೋಪದಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಕಾಶ್ಮೀರಿ ವಿದ್ಯಾರ್ಥಿಗಳಾದ ಅರ್ಶೀದ್ ಯೂಸುಫ್, ಇನಾಯತ್ ಅಲ್ತಾಫ್ ಶೇಖ್ ಮತ್ತು ಶೌಕತ್ ಅಹ್ಮದ್ ಗನೈ ಅವರನ್ನು ಅಕ್ಟೋಬರ್ 2021ರಲ್ಲಿ ಆಗ್ರಾದಲ್ಲಿ  ಬಂಧಿಸಲಾಗಿತ್ತಲ್ಲದೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿತ್ತು. ಸುಮಾರು ನಾಲ್ಕು ತಿಂಗಳು ಜೈಲಿನಲ್ಲಿದ್ದ ಅವರ ವಿರುದ್ಧ ಈ ಚಾರ್ಜ್ ಶೀಟ್ ದಾಖಲಾಗಿದೆ. ಅವರ ಜಾಮೀನು ಅರ್ಜಿ ವಿಚಾರಣೆ ಸತತ ಮುಂದೂಡಲ್ಪಡುತ್ತಿದೆ. ಅವರು ಜಾಮೀನಿಗೆ ಅರ್ಹರಾಗಿದ್ದರೂ ಅವರ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ಅವರ ಪರ ವಾದಿಸುತ್ತಿರುವ ವಕೀಲ ಮಧುವನ್ ದತ್ತ ಹೇಳುತ್ತಾರೆ.

ವಿದ್ಯಾರ್ಥಿಗಳ ಎರಡು ಅಪೀಲುಗಳು ಅಲಹಾಬಾದ್ ಹೈಕೋರ್ಟ್ ಮುಂದೆ ಬಾಕಿಯಿವೆ.  ಆಗ್ರಾದಿಂದ ಹತ್ತಿರದ ಜಿಲ್ಲೆಯ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೂ ಇದರಲ್ಲಿ ಸೇರಿದ್ದು ಇದರ ವಿಚಾರಣೆ ಜನವರಿ 28ರಂದು ನಡೆಯಲಿದೆ. ಎರಡನೇ ಅರ್ಜಿ ಜಾಮೀನಿಗೆ ಸಂಬಂಧಿಸಿದ್ದು ಡಿಸೆಂಬರ್ 23ರಂದು ವಿಚಾರಣೆ ನಡೆಯಬೇಕಿದ್ದರೂ ಹಲವಾರು ಪ್ರಕ್ರಿಯೆಗಳ ವಿಳಂಬದಿಂದ ವಿಚಾರಣೆ ನಡೆದಿಲ್ಲ.

ಮೂವರೂ ಆಗ್ರಾದ  ರಾಜಾ ಬಲವಂತ್ ಸಿಂಗ್ ಇಂಜಿನಿಯರಿಂಗ್ ಟೆಕ್ನಿಕಲ್ ಕಾಲೇಜು ವಿದ್ಯಾರ್ಥಿಗಳಾಗಿದ್ದು ಜತೆಯಾಗಿ ವಾಸಿಸುತ್ತಿದ್ದರು. ಅಕ್ಟೋಬರ್ 24, 2021ರಂದು ನಡೆದ ಕ್ರಿಕೆಟ್ ಪಂದ್ಯದ ನಂತರ ಅವರನ್ನು ಬಂಧಿಸಿದಾಗ ಅವರ ವಿರುದ್ಧ ಸೆಕ್ಷನ್ 124ಎ (ದೇಶದ್ರೋಹ), 153ಎ( ವಿವಿಧ ಗುಂಪುಗಳ ನಡುವೆ ದ್ವೇಷ ಹರಡುವುದು) ಹಾಗೂ ಸೆಕ್ಷನ್ 501 ಬಿ ಮತ್ತು ಐಟಿ ಕಾಯಿದೆಯ ಸೆಕ್ಷನ್ 66-ಎಫ್ ಅನ್ವಯ ಪ್ರಕರಣ ದಾಖಲಿಸಲಾಗಿತ್ತು.

ಅವರನ್ನು ಬಿಡುಗಡೆಗೊಳಿಸುವಂತೆ ಅವರ ಕುಟುಂಬಗಳು ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೂ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News