2006ರ ಕೋಝಿಕ್ಕೋಡ್ ಅವಳಿ ಸ್ಫೋಟ ಪ್ರಕರಣ: ಕೇರಳ ಹೈಕೋರ್ಟ್ ನಿಂದ ಆರೋಪಿಗಳಿಬ್ಬರ ಖುಲಾಸೆ

Update: 2022-01-27 15:29 GMT

ಕೊಚ್ಚಿ,ಜ.27: ಕೋಝಿಕ್ಕೋಡ್ ನಲ್ಲಿ 2006ರಲ್ಲಿ ಸಂಭವಿಸಿದ್ದ ಅವಳಿ ಸ್ಫೋಟಗಳ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಲ್ಪಟ್ಟಿದ್ದ ಲಷ್ಕರೆ ತೈಬಾದ ಸ್ವಘೋಷಿತ ದಕ್ಷಿಣ ಭಾರತ ಮುಖ್ಯಸ್ಥ ತಡಿಯಂತೆ ವಿಡಾ ನಾಸೀರ್ ಮತ್ತು ಆತನ ಸಂಬಂಧಿ ಶಫಾಝ್ ಅವರನ್ನು ಕೇರಳ ಉಚ್ಚ ನ್ಯಾಯಾಲಯವು ಗುರುವಾರ ಖುಲಾಸೆಗೊಳಿಸಿದೆ. ಇದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಪ್ರಕರಣದಲ್ಲಿ ಅಬ್ದುಲ್ ಹಲೀಂ ಮತ್ತು ಅಬೂಬಕರ್ ಯೂಸುಫ್ ಅವರನ್ನು ಬಿಡುಗಡೆಗೊಳಿಸಿದ್ದನ್ನು ಪ್ರಶ್ನಿಸಿ ಎನ್ಐಎ ಸಲ್ಲಿಸಿದ್ದ ಮೇಲ್ಮನವಿಯನ್ನೂ ನ್ಯಾಯಾಲಯವು ವಜಾಗೊಳಿಸಿದೆ.

ಎನ್ಐಎ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ನಾಸೀರ್ ಮತ್ತು ಶಫಾಝ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ವಿನೋದ ಚಂದ್ರನ್ ಮತ್ತು ಝಿಯಾದ್ ರಹ್ಮಾನ್ ಎ.ಎ.ಅವರನ್ನೊಳಗೊಂಡ ವಿಭಾಗೀಯ ಪೀಠವು ತೀರ್ಪನ್ನು ಪ್ರಕಟಿಸಿತು.

ಎರ್ನಾಕುಳಂನ ಎನ್ಐಎ ವಿಶೇಷ ನ್ಯಾಯಾಲಯವು ಮೊದಲ ಆರೋಪಿ ನಾಸೀರ್ ಮತ್ತು ನಾಲ್ಕನೇ ಆರೋಪಿ ಶಫಾಝ್ ಗೆ ಜೀವಾವಧಿ ಶಿಕ್ಷೆಯ ಜೊತೆಗೆ ಅನುಕ್ರಮವಾಗಿ 1.60 ಲ.ರೂ. ಮತ್ತು 1.10 ಲ.ರೂ.ದಂಡವನ್ನು ವಿಧಿಸಿತ್ತು. ನ್ಯಾಯಾಲಯವು ಮೂರನೇ ಆರೋಪಿ ಅಬ್ದುಲ್ ಹಲೀಂ ಮತ್ತು ಒಂಭತ್ತನೇ ಆರೋಪಿ ಅಬೂಬಕರ್ ಯೂಸಫ್ ಅವರನ್ನು ಬಿಡುಗಡೆಗೊಳಿಸಿತ್ತು. ನಾಲ್ವರು ಆರೋಪಿಗಳ ವಿರುದ್ಧ ವಿಚಾರಣೆ 2011,ಆ.11ರಂದು ಪೂರ್ಣಗೊಂಡಿತ್ತು. ವಿಚಾರಣೆಯ ಅವಧಿಯಲ್ಲಿ ತಲೆಮರೆಸಿಕೊಂಡಿದ್ದ ಎರಡನೇ ಆರೋಪಿ ಮುಹಮ್ಮದ್ ಅಶರ್ ಮತ್ತು ಎಂಟನೇ ಆರೋಪಿ ಪಿ.ಪಿ.ಯೂಸಫ್ ಅವರನ್ನು ಎನ್ಐಎ 2019ರಲ್ಲಿ ಬಂಧಿಸಿತ್ತು. ಆರನೇ ಆರೋಪಿ ಫಾಯಿಝ್ ವಿಚಾರಣೆಯ ಸಂದರ್ಭದಲ್ಲಿ ಮೃತಪಟ್ಟಿದ್ದರೆ ಏಳನೇ ಆರೋಪಿ ಶಮ್ಮಿ ಫಿರೋಝ್ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿದ್ದ. ಐದನೇ ಆರೋಪಿ ಅಬ್ದುಲ್ ಜಲೀಲ್‌ನನ್ನು ಎನ್ಐಎ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಸೇರಿಸಿರಲಿಲ್ಲ.

"ನಾಸೀರ್ ಮತ್ತು ಇತರ ಆರೋಪಿಗಳು ಒಳಸಂಚು ರೂಪಿಸಿದ್ದರು ಮತ್ತು 2006,ಮಾ.3ರಂದು ಕೋಝಿಕ್ಕೋಡ್ ಕೆಎಸ್‌ಆರ್‌ಟಿಸಿ ಮತ್ತು ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟಗಳನ್ನು ನಡೆಸಿದ್ದರು. ಎರಡನೇ ಮಾರಾಡ್ ಕೋಮು ಹತ್ಯಾಕಾಂಡದಲ್ಲಿ ಮುಸ್ಲಿಂ ಆರೋಪಿಯ ಬಗ್ಗೆ ಕಾರ್ಯಾಂಗದ ಪಕ್ಷಪಾತದ ಧೋರಣೆ ಮತ್ತು ನ್ಯಾಯಾಂಗದಿಂದ ಜಾಮೀನು ನಿರಾಕರಣೆಯ ವಿರುದ್ಧ ಸೇಡಿನ ಕ್ರಮವಾಗಿ ಆರೋಪಿಗಳು ಬಾಂಬ್ ಸ್ಫೋಟಗಳನ್ನು ನಡೆಸಿದ್ದರು" ಎಂದು ಎನ್ಐಎ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿತ್ತು.

ಮಾ.3ರಂದು ಅಪರಾಹ್ನ 10 ನಿಮಿಷಗಳ ಅಂತರದಲ್ಲಿ ಮಾವೂರು ರೋಡ್ ನ ಎರಡು ಬಸ್ ನಿಲ್ದಾಣಗಳಲ್ಲಿ ಈ ಸ್ಫೋಟಗಳು ಸಂಭವಿಸಿದ್ದವು. ಬಾಂಬ್‌ಗಳನ್ನು ಸ್ಫೋಟಿಸಲು ಟೈಮರ್ ಸಾಧನಗಳನ್ನು ಬಳಸಲಾಗಿತ್ತು. ಓರ್ವ ಪೊಲೀಸ್ ಸೇರಿದಂತೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಆರಂಭದಲ್ಲಿ ವಿಶೇಷ ಪೊಲೀಸ್ ತಂಡವು ಪ್ರಕರಣದ ತನಿಖೆಯನ್ನು ನಡೆಸಿದ್ದು,ಬಳಿಕ ಕ್ರೈಂ ಬ್ರಾಂಚ್ ಗೆ ಹಸ್ತಾಂತರಿಸಲಾಗಿತ್ತು. 2009ರಲ್ಲಿ ಎನ್ಐಎ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು

ನಾಸೀರ್ ನನ್ನು 2009ರಲ್ಲಿ ಮೇಘಾಲಯದಲ್ಲಿ ಭಾರತ-ಬಾಂಗ್ಲಾದೇಶ ಗಡಿಯ ಬಳಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News