ಜಾರ್ಖಂಡ್: ಶಂಕಿತ ಮಾವೋವಾದಿಗಳಿಂದ ಹಳಿ ಸ್ಫೋಟ, ರೈಲುಗಳ ಸೇವೆಯಲ್ಲಿ ವ್ಯತ್ಯಯ

Update: 2022-01-27 16:13 GMT
ಸಾಂದರ್ಭಿಕ ಚಿತ್ರ:PTI

ಗಿರಿಧಿ,ಜ.27: ಜಾರ್ಖಂಡ್ ನ ಗಿರಿಧಿ ಜಿಲ್ಲೆಯಲ್ಲಿ ಶಂಕಿತ ಮಾವೋವಾದಿಗಳು ಗುರುವಾರ ನಸುಕಿನಲ್ಲಿ ರೈಲು ಹಳಿಗಳನ್ನು ಸ್ಫೋಟಿಸಿರುವುದು ವರದಿಯಾಗಿದೆ. ಸ್ಫೋಟದ ಬಳಿಕ ಹೌರಾ-ಹೊಸದಿಲ್ಲಿ ಮಾರ್ಗದಲ್ಲಿ ಸುಮಾರು ಆರು ಗಂಟೆಗಳ ಕಾಲ ರೈಲು ಸೇವೆಗಳು ವ್ಯತ್ಯಯಗೊಂಡಿದ್ದವು. ಶಂಕಿತ ಮಾವೋವಾದಿಗಳು ನಡೆಸಿರುವ ಸ್ಫೋಟದಿಂದಾಗಿ ಹಳಿಗಳಲ್ಲಿಯ ಫಿಷ್‌ ಪ್ಲೇಟ್‌ ಗಳಿಗೆ ಹಾನಿಯಾಗಿದೆ. ದುಷ್ಕರ್ಮಿಗಳ ಬಂಧನಕ್ಕಾಗಿ ವ್ಯಾಪಕ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಎಸ್‌ಪಿ ಅಮಿತ್ ರೇಣು ತಿಳಿಸಿದರು.

ನಸುಕಿನ 12:30ರ ಸುಮಾರಿಗೆ ಚಿಚಾಕಿ ಮತ್ತು ಕರ್ಮಾಬಾದ್ ನಿಲ್ದಾಣಗಳ ನಡುವೆ ಸ್ಫೋಟ ನಡೆದಿದ್ದು, ಪ್ಯಾನೆಲ್ ಕ್ಲಿಪ್ ಕೂಡ ಹಾನಿಗೀಡಾಗಿದೆ ಎಂದು ರೈಲ್ವೆ ರಕ್ಷಣಾ ಪಡೆಯ ಹಿರಿಯ ಕಮಾಂಡಂಟ್ ಹೇಮಂತ್ ಕುಮಾರ್ ತಿಳಿಸಿದರು.ಘಟನೆಯಿಂದಾಗಿ ಪೂರ್ವ ಮಧ್ಯ ರೈಲ್ವೆಯ ಧನಬಾದ್ ವಿಭಾಗದಡಿ ಗೋಮೊ-ಗಯಾ ಸೆಕ್ಷನ್‌ನಲ್ಲಿ ಹಲವಾರು ರೈಲುಗಳನ್ನು ರದ್ದುಗೊಳಿಸಲಾಗಿತ್ತು ಅಥವಾ ಸಂಚಾರ ಮಾರ್ಗ ಬದಲಿಸಲಾಗಿತ್ತು. ಬೆಳಿಗ್ಗೆ 6:30ರ ನಂತರವೇ ರೈಲುಗಳ ಸಂಚಾರ ಪುನರಾರಂಭಗೊಂಡಿದೆ ಎಂದರು.

ಮೂರು ದಿನಗಳ ಹಿಂದಷ್ಟೇ ಮಾವೋವಾದಿಗಳು ಗಿರಿಧಿ ಜಿಲ್ಲೆಯ ಸರೈಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಮೊಬೈಲ್ ಟವರ್‌ ಗಳು ಮತ್ತು ನೀರಿನ ಟ್ಯಾಂಕನ್ನು ಸ್ಫೋಟಿಸಿದ್ದರು.

ತನ್ನ ಹಿರಿಯ ನಾಯಕ ಪ್ರಶಾಂತ್ ಬೋಸ್ ಅಲಿಯಾಸ್ ಕಿಶನ್ ದಾ ಬಂಧನವನ್ನು ವಿರೋಧಿಸಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯು ಜಾರ್ಖಂಡ್ ಮತ್ತು ಬಿಹಾರಗಳಲ್ಲಿ 24 ಗಂಟೆಗಳ ಬಂದ್‌ಗೆ ಕರೆ ನೀಡಿತ್ತು.

ತನ್ನ ತಲೆಯ ಮೇಲೆ ಒಂದು ಕೋ.ರೂ.ಗಳ ಬಹುಮಾನವನ್ನು ಹೊತ್ತಿದ್ದ ಬೋಸ್ ಜಾರ್ಖಂಡ್,ಬಿಹಾರ,ಪ.ಬಂಗಾಳ,ಒಡಿಶಾ,ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ದಾಳಿ ಮತ್ತು ಬೆಂಕಿ ಹಚ್ಚುವಿಕೆಯ ನೂರಕ್ಕೂ ಅಧಿಕ ಘಟನೆಗಳ ಹಿಂದಿನ ಮುಖ್ಯ ರೂವಾರಿಯಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News