ರೈಲ್ವೆ ಪರೀಕ್ಷೆಗೆ ಸಂಬಂಧಿಸಿ ಬಿಹಾರ ಬಂದ್‌: ರಸ್ತೆ ತಡೆ ನಡೆಸಿ ಟೈರ್‌ಗಳನ್ನು ಸುಟ್ಟುಹಾಕಿದ ಪ್ರತಿಭಟನಾಕಾರರು

Update: 2022-01-28 05:21 GMT
Photo: Twitter/@ANI

ಪಾಟ್ನಾ: ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಇಂದು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬಿಹಾರದ ರಾಜಧಾನಿ ಪಾಟ್ನಾ ಹಾಗೂ ರಾಜ್ಯದ ಇತರೆಡೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಅಖಿಲ ಭಾರತ ವಿದ್ಯಾರ್ಥಿಗಳ ಸಂಘ ಅಥವಾ ಎಐಎಸ್ಎ  ಸೇರಿದಂತೆ ಹಲವಾರು ವಿದ್ಯಾರ್ಥಿಗಳ ಸಮೂಹಗಳು ಬಿಹಾರ ಬಂದ್‌ಗೆ ಕರೆ ನೀಡಿವೆ.

ರೈಲ್ವೇ ಉದ್ಯೋಗಗಳ ಪರೀಕ್ಷೆ ವಿರೋಧಿಸಿ ವಿದ್ಯಾರ್ಥಿಗಳು ಗಣರಾಜ್ಯೋತ್ಸವ ದಿನದಂದು ನಡೆಸಿದ್ದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಬಿಹಾರದಲ್ಲಿ ಪ್ರಯಾಣಿಕರ ರೈಲಿಗೆ ಬೆಂಕಿ ಹಚ್ಚಲಾಗಿತ್ತು ಹಾಗೂ ಮತ್ತೊಂದು ರೈಲಿನ  ಮೇಲೆ ಕಲ್ಲುಗಳಿಂದ ದಾಳಿ ಮಾಡಲಾಗಿತ್ತು.

ಎರಡು ಹಂತಗಳಲ್ಲಿ ಪರೀಕ್ಷೆ ನಡೆಸುವ ರೈಲ್ವೆ ನಿರ್ಧಾರವನ್ನು ವಿರೋಧಿಸಿರುವ ವಿದ್ಯಾರ್ಥಿಗಳು ಜನವರಿ 15ರಂದು ಪ್ರಕಟವಾಗಿರುವ ಮೊದಲ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ  ಉತ್ತೀರ್ಣರಾದವರಿಗೆ ಎರಡನೇ ಹಂತದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.

ಸುಮಾರು 1.25 ಕೋಟಿ ಅಭ್ಯರ್ಥಿಗಳು ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದ್ದು, ಹಂತ 2 ರಿಂದ ಹಂತ 6 ರವರೆಗೆ 35,000 ಕ್ಕೂ ಹೆಚ್ಚು ಪೋಸ್ಟ್‌ಗಳು ಇವೆ ಎಂದು ಜಾಹೀರಾತು ನೀಡಲಾಗಿದೆ.  ಪ್ರಾರಂಭಿಕ ವೇತನವು ತಿಂಗಳಿಗೆ ₹ 19,900 ರಿಂದ ₹ 35,400 ವರೆಗೆ ಇರುತ್ತದೆ. ಸುಮಾರು 60 ಲಕ್ಷ ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಗುರುವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ವಿರೋಧ ಪಕ್ಷಗಳಾದ ರಾಷ್ಟ್ರೀಯ ಜನತಾ ದಳ, ಕಾಂಗ್ರೆಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಅಥವಾ ಸಿಪಿಐ, ಮತ್ತು ಸಿಪಿಎಂ, "ಬಿಹಾರವು ದೇಶದಲ್ಲಿ ಅತಿ ಹೆಚ್ಚು ಯುವಜನರನ್ನು ಹೊಂದಿದೆ ಹಾಗೂ  ಅತಿ ಹೆಚ್ಚು ನಿರುದ್ಯೋಗವನ್ನು ಹೊಂದಿದೆ. ಕೇಂದ್ರ ಹಾಗೂ ಬಿಹಾರ ಸರಕಾರಗಳಿಂದ ವಿದ್ಯಾರ್ಥಿಗಳಿಗೆ ವಂಚನೆಯಾಗುತ್ತಿದೆ. ಸರಕಾರವು  ಅವರಿಗೆ ಉದ್ಯೋಗದ ಭರವಸೆಯನ್ನು ನೀಡುತ್ತದೆ.  ಆದರೆ ಅವರು ಉದ್ಯೋಗಕ್ಕಾಗಿ ಒತ್ತಾಯಿಸಿ ಬೀದಿಗೆ ಬಂದಾಗ ನಿತೀಶ್ ಕುಮಾರ್ ಸರಕಾರವು ಅವರ ಮೇಲೆ ಲಾಠಿಪ್ರಹಾರ ನಡೆಸುತ್ತದೆ ” ಎಂದು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News