100 ಮಂದಿ ಪೊಲೀಸರ ರಕ್ಷಣೆಯಲ್ಲಿ ಕುದುರೆಯೇರಿ ಮೆರವಣಿಗೆ ಹೊರಟ ದಲಿತ ವರ

Update: 2022-01-28 10:42 GMT
ಸಾಂದರ್ಭಿಕ ಚಿತ್ರ

ಲಕ್ನೋ: ತನ್ನ ವಿವಾಹ ಸಮಾರಂಭಕ್ಕೆ ಕುದುರೆಯೇರಿ ಹೊರಟ ದಲಿತ ವರನಿಗೆ ಸುಮಾರು 100 ಮಂದಿ ಪೊಲೀಸರು ರಕ್ಷಣೆಯೊದಗಿಸಿದ ಘಟನೆ ನೀಮುಚ್ ಜಿಲ್ಲೆಯ ಸರ್ಸಿ ಗ್ರಾಮದಿಂದ ಗುರುವಾರ ವರದಿಯಾಗಿದೆ. ಮೇಲ್ಜಾತಿಯವರು ವರನಿಗೆ ತೊಂದರೆಯುಂಟು ಮಾಡಬಹುದೆಂಬ ಭಯದಿಂದ ಈ ಪೊಲೀಸ್ ರಕ್ಷಣೆ ಒದಗಿಸಲಾಗಿತ್ತು.

ಗ್ರಾಮದ ಪರಿಶಿಷ್ಟ ಜಾತಿಯವರ ಪೈಕಿ ತನ್ನ ವಿವಾಹ ಮೆರವಣಿಗೆಗಾಗಿ ಕುದುರೆಯಲ್ಲಿ ಹೊರಟ ಮೊದಲ ವ್ಯಕ್ತಿ ರಾಹುಲ್ ಆಗಿದ್ದರಿಂದ ಮುಂಜಾಗರೂಕತಾ ಕ್ರಮವಾಗಿ ಆತನಿಗೆ ರಕ್ಷಣೆಯೊದಗಿಸಬೇಕೆಂದು ಆತನ ತಂದೆ ಫಕೀರ್‍ಚಂದ್ ಮೇಘಲ್ ಎಂಬಾತ ಪೊಲೀಸರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿತ್ತು.

ಒಟ್ಟು 100 ಪೊಲೀಸ್ ಸಿಬ್ಬಂದಿ ಇಡೀ ಗ್ರಾಮದಲ್ಲಿ ಕಣ್ಗಾವಲಿರಿಸಿ ವರನ ಮೆರವಣಿಗೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಂಡರು.

ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನರು ವಿವಾಹ ಸಂದರ್ಭ ಕುದುರೆಯೇರಿ ಬರಲು ಭಯ ಪಡುತ್ತಾರೆ. ಹಿಂದೆಲ್ಲಾ ಹೀಗೆ ಮೆರವಣಿಗೆ ಹೊರಟಾಗ ಗೂಂಡಾಗಳು ತಡೆಯುತ್ತಿದ್ದುದರಿಂದ ಈ ಬಾರಿ ಪೊಲೀಸ್ ರಕ್ಷಣೆ ಕೋರಲಾಗಿತ್ತು ಎಂದು ಸ್ಥಳೀಯ ಬಹುಜನ್ ಸಮಾಜ್ ಪಕ್ಷದ ನಾಯಕ ರಾಧೇಶ್ಯಾಮ್ ಕಮಾಂಡರ್ ಹೇಳಿದ್ದಾರೆ.

ರವಿವಾರ ಸಾಗರ ಜಿಲ್ಲೆಯ ಗನಿಯಾರಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಕುದುರೆಯೇರಿ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ದಲಿತ ವರ ದಿಲೀಪ್ ಅಹಿರ್ವರ್ ಎಂಬಾತನ ಮನೆಯ ಮೇಲೆ ಕೆಲವರು ರಾತ್ರಿ ಹೊತ್ತು ದಾಳಿ ನಡೆಸಿ ಕಲ್ಲೆಸೆದಿದ್ದರು. ಈ ಸಂಬಂಧ 20 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News