ʼಮಾಸ್ಕ್‌ ಧರಿಸಿಲ್ಲವೆಂದುʼ ಕಾನೂನು ವಿದ್ಯಾರ್ಥಿಗೆ ತೀವ್ರ ಹಲ್ಲೆ ನಡೆಸಿ ಧರ್ಮ ನಿಂದನೆಗೈದ ಪೊಲೀಸರು: ಆರೋಪ

Update: 2022-01-28 16:24 GMT
Photo: Jeeva Bharati/Thewire.in

ಚೆನ್ನೈ: ದೇಶವೇ ಬೆಚ್ಚಿಬಿದ್ದ ಪೊಲೀಸ್‌ ಕಸ್ಟಡಿಯಲ್ಲಿ ತಂದೆ-ಮಗನ ಜೋಡಿ ಕೊಲೆ ಬಳಿಕ ಇದೀಗ ಮತ್ತೊಂದು ಕಸ್ಟಡಿ ದೌರ್ಜನ್ಯ ತಮಿಳುನಾಡಿನಿಂದ ವರದಿಯಾಗಿದೆ. ಮಾಸ್ಕ್‌ ಧರಿಸದ ಕ್ಷುಲ್ಲಕ ಕಾರಣಕ್ಕೆ ಪೊಲೀಸರು ತಮ್ಮ ಕಸ್ಟಡಿಯಲ್ಲಿ ಯುವಕನೋರ್ವನಿಗೆ ತೀವ್ರ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. 

ಜನವರಿ 13 ರಂದು ತಮಿಳುನಾಡು ರಾಜಧಾನಿ ಚೆನ್ನೈಯಲ್ಲಿ ಈ ಘಟನೆ ನಡೆದಿದ್ದು, 21 ವರ್ಷದ ಕಾನೂನು ವಿದ್ಯಾರ್ಥಿ ಅಬ್ದುಲ್‌ ರಹೀಂ ಎಂಬಾತನ ಮೇಲೆ ಪೊಲೀಸರು ಮಾಸ್ಕ್‌ ಸರಿಯಾಗಿ ಧರಿಸಿಲ್ಲ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ, ಧಾರ್ಮಿಕ ನಿಂದನೆಗೈದಿದ್ದಾರೆ ಎನ್ನಲಾಗಿದೆ. 

ರಹೀಮ್ ಸ್ಥಳೀಯ ಫಾರ್ಮಸಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಾ ತಮಿಳುನಾಡು ಡಾ. ಅಂಬೇಡ್ಕರ್ ಕಾನೂನು ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಎಕ್ಸಲೆನ್ಸ್ ಇನ್ ಲಾ‌ನ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಹಕರಿಗೆ ಔಷಧಿ ಡೆಲಿವರಿ ಮಾಡಿ ಹಿಂತಿರುಗುತ್ತಿದ್ದಾಗ ಮಾಸ್ಕ್‌ ಸರಿಯಾಗಿ ಧರಿಸಿಲ್ಲ ಎಂದು ಪೊಲೀಸರು ತಡೆದಿದ್ದಾರೆ. ಫೈನ್‌ ಕಟ್ಟಲು ನಿರಾಕರಿಸಿದಾಗ ಠಾಣೆಗೆ ಕರೆದೊಯ್ದು, ಅವಾಚ್ಯ ಪದಗಳಿಂದ ನಿಂದಿಸಿ, ದೈಹಿಕ ಹಲ್ಲೆ ಮಾಡಿದ್ದಾರೆಂದು ರಹೀಮ್  ಹೇಳಿದ್ದಾರೆ.

 
 
ಗಾಯಗೊಂಡಿದ್ದ ರಹೀಮ್ ಅವರನ್ನು ಬಳಿಕ ಸ್ಟಾನ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಿ ವೈರ್ ವರದಿಗಾರರು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದಾಗ, ಈ ವರದಿಗಾರರಿಗೆ ಆರಂಭದಲ್ಲಿ ಪ್ರವೇಶವನ್ನು ನಿರಾಕರಿಸಲಾಯಿತು ಮತ್ತು ಸುದೀರ್ಘ ವಾಗ್ವಾದದ ನಂತರ ಆಸ್ಪತ್ರೆಗೆ ಪ್ರವೇಶಿಸಲು ಅನುಮತಿಸಲಾಯಿತು ಎಂದು ದಿ ವೈರ್‌ ವರದಿ ಮಾಡಿದೆ. 

ನನಗೆ ಏನೋ ಆಗುತ್ತದೆ ಎಂದು ಭಯವಾಗಿತ್ತು, ಪೊಲೀಸರ ವರ್ತನೆ ನೋಡುವಾಗ ಸಾತಾಂಕುಳಂ (ತಂದೆ-ಮಗನ ಜೋಡಿಕೊಲೆ) ಪುನರಾವರ್ತನೆಯಾಗುತ್ತದೆ ಎಂದು ನಾನು ಭಯಗೊಂಡಿದ್ದೆ ಎಂದು ರಹೀಮ್‌ ವರದಿಗಾರರೊಂದಿಗೆ ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.  
 
ಘಟನೆಯ ಬಗ್ಗೆ ವಿವರಿಸಿದ ರಹೀಮ್, ಗ್ರಾಹಕರಿಗೆ ಔಷಧಿಗಳನ್ನು ತಲುಪಿಸಿದ ನಂತರ ತನ್ನ ಬೈಸಿಕಲ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ತನ್ನನ್ನು ಪೊಲೀಸರು ತಡೆದರು. “ನಾನು ಮಾಸ್ಕ್ ಸರಿಯಾಗಿ ಧರಿಸಿರಲಿಲ್ಲ ನಿಜ; ನನಗೆ ಉಸಿರಾಟದ ಸಮಸ್ಯೆಗಳಿವೆ, ಆದರೆ ಸುಮಾರು 100 ಅಡಿ ದೂರದಲ್ಲಿ ಪೊಲೀಸರನ್ನು ಕಂಡಾಗ, ಮಾಸ್ಕ್‌ ಸರಿ ಪಡಿಸಿದ್ದೇನೆ ಎಂದು ಹೇಳಿದ್ದಾರೆ.

“ಎಂಆರ್ ನಗರ ಜಂಕ್ಷನ್ ಬಳಿ ಇಬ್ಬರು ಮಹಿಳಾ ಪೊಲೀಸರು ನನ್ನನ್ನು ತಡೆದಾಗ ರಾತ್ರಿ 11.30 ಆಗಿತ್ತು. ನಾನು ಔಷಧಿಗಳನ್ನು ತಲುಪಿಸಿ ಹಿಂತಿರುಗುತ್ತಿದ್ದೇನೆ ಎಂದು ಅವರಿಗೆ ವಿವರಿಸಿ ನನ್ನ ಗುರುತಿನ ಚೀಟಿ ತೋರಿಸಿದೆ. ನಾನು ದಂಡ ಪಾವತಿಸಬೇಕೆಂದು ಅವರು ಒತ್ತಾಯಿಸಿದರು ಆದರೆ ನಾನು ಕಾನೂನು ವಿದ್ಯಾರ್ಥಿ ಎಂದು ವಿವರಿಸಿದೆ. ಆಗ ಅವರಲ್ಲಿ ಒಬ್ಬರು ನನ್ನನ್ನು ಹೊಡೆಯಲು ಪ್ರಯತ್ನಿಸಿದರು. ಪೋಲೀಸರು ನಾನು ಹೇಳಿದ್ದನ್ನೆಲ್ಲ ಕೇಳುವ ಮೂಡ್‌ನಲ್ಲಿ ಇರಲಿಲ್ಲ,” ಎಂದು ರಹೀಮ್ ವರದಿಗಾರರಿಗೆ ತಿಳಿಸಿದ್ದಾರೆ. 


 
ಬಳಿಕ ನನ್ನನ್ನು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ನನ್ನ ಸೈಕಲ್‌ಅನ್ನು ನೀಡಲು ಪೊಲೀಸರು ನಿರಾಕರಿಸಿದರು. ಇದು ಮತ್ತೊಂದು ವಾಗ್ವಾದಕ್ಕೆ ಕಾರಣವಾಯಿತು. ನಂತರ ಉತಿರಕುಮಾರ್‌ ಎಂಬ ಪೊಲೀಸ್‌ ಸಿಬ್ಬಂದಿ ಒಬ್ಬರು ನನ್ನನ್ನು ಹೋಗಲು ಬಿಡುವುದಿಲ್ಲ ಎಂದು ಪ್ಲಾಸ್ಟಿಕ್‌ ಪೈಪ್‌ನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾರೆ ಎಂದು ರಹೀಮ್‌ ಹೇಳಿದ್ದಾರೆ. 
  
“ನಾನು ನನ್ನ ಫೋನ್‌ನಲ್ಲಿ ವೀಡಿಯೊ ರೆಕಾರ್ಡರ್ ಅನ್ನು ಆನ್ ಮಾಡಿ ಅದನ್ನು ಮೇಜಿನ ಮೇಲೆ ಇರಿಸಿದೆ. ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದಾಗ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಲೇ ಇದ್ದರು. ನನ್ನ ಸೀನಿಯರ್‌ಗಳು ಬಂದು ಕ್ಷಮೆ ಕೇಳುವಂತೆ ಸಲಹೆ  ನೀಡಿದರು. ಆದರೆ,  ಪೊಲೀಸರು ನನ್ನ ಬಟ್ಟೆಗಳನ್ನು ತೆಗೆದು ಒಳಉಡುಪಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಉತಿರಕುಮಾರ್ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿ ಪೈಪ್‌ನಿಂದ ಥಳಿಸುತ್ತಲೇ ಇದ್ದಾಗ ಮಹಿಳಾ ಪೋಲೀಸರೊಬ್ಬರು ನನಗೆ ಬೂಟಿನಿಂದ ಒದ್ದರು. ಅವರು ಕೆಲವು ನಿಮಿಷಗಳ ಕಾಲ ನನ್ನ ಮೊಣಕಾಲುಗಳ ಮೇಲೆ ನಿಂತರು. ಈ ಹೊತ್ತಿಗೆ, ನಾನು ಉತಿರಕುಮಾರ್ ಅವರ ಪಾದಗಳನ್ನು ಹಿಡಿದು, ನನ್ನನ್ನು ಹೋಗಲು ಬಿಡಿ ಎಂದು ಬೇಡಿಕೊಂಡೆ, ” ಎಂದು ರಹೀಮ್‌ ತನಗಾದ ದೌರ್ಜನ್ಯವನ್ನು ವೈರ್‌ ವರದಿಗಾರರೊಂದಿಗೆ ವಿವರಿಸಿದ್ದಾರೆ.  
 
ಬೆಳಗ್ಗೆ 5:25 ರ ಹೊತ್ತಿಗೆ ನೋವು ತಾಳಲಾರದೆ ಅಮ್ಮನಿಗೆ ಕಾಲ್‌ ಮಾಡಿ ಆದುದ್ದೆಲ್ಲವೂ ವಿವರಿಸಿದೆ. ಆಕೆ ಅರ್ಧ ಗಂಟೆಯಲ್ಲಿ ಪೊಲೀಸ್‌ ಠಾಣೆ ತಲುಪಿದರು.  ನಿರಂತರ ದೌರ್ಜನ್ಯದಿಂದ ನಾನು ನಿತ್ರಾಣಗೊಂಡು ಬಿದ್ದಿದ್ದೆ. ಅವಮಾನ ಮತ್ತು ನೋವನ್ನು ಸಹಿಸಲಾಗದೆ ನನ್ನನ್ನೇ ಇರಿದುಕೊಳ್ಳಲು ತಾಯಿಯಲ್ಲಿ ಬ್ಲೇಡ್‌ ನೀಡುವಂತೆ ಬೇಡಿಕೊಂಡೆ. ಪೊಲೀಸರು ನನ್ನ ಧರ್ಮದ ಕಾರಣಕ್ಕೆ ನನ್ನನ್ನು ಹಂಗಿಸಿದ್ದರು. ನನಗಾದ ಅವಮಾನವನ್ನು ಮತ್ತು ನೋವನ್ನು ಸಹಿಸಲೇ ಸಾಧ್ಯವಿಲ್ಲ ಎಂದು ರಹೀಮ್‌ ನೋವು ತೋಡಿಕೊಂಡಿದ್ದಾರೆ. 
 
ಪೊಲೀಸರ ದೌರ್ಜನ್ಯದ ನಂತರ, ರಹೀಮ್ ಅವರನ್ನು ಚೆಂಗಲ್ಪಟ್ಟು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು, ಅವರು ಆಸ್ಪತ್ರೆಗೆ ದಾಖಲಿಸಲು ಆದೇಶಿಸಿದರು. ಮರುದಿನ ಅವರಿಗೆ ಜಾಮೀನು ಸಿಕ್ಕಿತು.

ಜನವರಿ 21 ರಂದು, ವಕೀಲರ ನಿರಂತರ ಪ್ರತಿಭಟನೆಯ ನಂತರ, ಒಂಬತ್ತು ಪೊಲೀಸರ ವಿರುದ್ಧ ಐಪಿಸಿ ಸೆಕ್ಷನ್ 294B  , 323  ಮತ್ತು 324  ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
 
"ಕಾನೂನು ವಿದ್ಯಾರ್ಥಿಯಾಗಿರುವ ನನ್ನ ಮಗ ಪೊಲೀಸರ ಕೈಯಲ್ಲಿ ಇಷ್ಟೊಂದು ನರಳಿದ್ದರೆ, ಸಾರ್ವಜನಿಕರ ದುಸ್ಥಿತಿಯನ್ನು ಊಹಿಸಿಕೊಳ್ಳಿ" ಎಂದು ರಹೀಮ್‌ನ ತಾಯಿ ಶಬಾನಾ ಹೇಳಿದ್ದಾರೆ. ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಈ ಕೃತ್ಯ ಎಸಗಿದ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೃಪೆ: Thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News