ಉಕ್ರೇನ್ ರಾಕೆಟ್ ಕಾರ್ಖಾನೆಯಲ್ಲಿ ಗುಂಡಿನ ದಾಳಿ: 5 ಮಂದಿ ಮೃತ್ಯು

Update: 2022-01-28 16:58 GMT
ಸಾಂದರ್ಭಿಕ ಚಿತ್ರ

ಕೀವ್, ಜ.28: ಪೂರ್ವ ಉಕ್ರೇನ್ ನ ನಿಪ್ರೊ ನಗರದಲ್ಲಿನ ರಾಕೆಟ್ ಕಾರ್ಖಾನೆಯಲ್ಲಿ ಉಕ್ರೇನ್ ನ ರಾಷ್ಟ್ರೀಯ ಭದ್ರತಾ ಪಡೆಯ ಯೋಧ ನಡೆಸಿದ ಗುಂಡಿನ ದಾಳಿಯಲ್ಲಿ 5 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಮೃತರಲ್ಲಿ ನಾಲ್ವರು ಯೋಧರಾಗಿದ್ದರೆ ಓರ್ವ ಫ್ಯಾಕ್ಟರಿಯ ಸಿಬ್ಬಂದಿ. ಬೆಳಿಗ್ಗೆ 4 ಗಂಟೆಗೆ ಫ್ಯಾಕ್ಟರಿಯ ಆವರಣದಲ್ಲಿರುವ ಭದ್ರತಾ ಸಿಬ್ಬಂದಿ ಕೊಠಡಿಯಲ್ಲಿ ಯೋಧರು ಕರ್ತವ್ಯಕ್ಕೆ ಹಾಜರಾಗಲು ತಮ್ಮ ಆಯುಧಗಳನ್ನು ಪಡೆದುಕೊಳ್ಳುವ ಸಂದರ್ಭ ಗುಂಡಿನ ದಾಳಿ ನಡೆದಿದೆ. ಆಗ ಕೊಠಡಿಯಲ್ಲಿ 22 ಮಂದಿಯಿದ್ದರು. ಗುಂಡೇಟಿನಿಂದ 5 ಮಂದಿ ಮೃತಪಟ್ಟರೆ ಇತರ 5 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಫ್ಯಾಕ್ಟರಿಯಲ್ಲಿ ಕರ್ತವ್ಯದಲ್ಲಿದ್ದ ಯೋಧರತ್ತ ಆರೋಪಿ ಯೋಧ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಉಕ್ರೇನ್ ನ ವಿದೇಶ ವ್ಯವಹಾರ ಇಲಾಖೆ ಹೇಳಿದೆ.

ರಶ್ಯಾದೊಂದಿಗಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟು ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಸಂದರ್ಭದಲ್ಲೇ ಅತ್ಯಂತ ಬಿಗುಭದ್ರತೆಯ ಈ ಕಾರ್ಖಾನೆಯಲ್ಲಿ ನಡೆದ ದುರಂತ ತೀವ್ರ ಆತಂಕಕ್ಕೆ ಕಾರಣವಾಗಿದೆ. ದಾಳಿ ಮಾಡಿದ ಯೋಧನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ. ಆದರೆ ರಶ್ಯಾವು ಉಕ್ರೇನ್ ಮೇಲಿನ ಆಕ್ರಮಣಕ್ಕೆ ನೆಪವಾಗಿ ವಿಧ್ವಂಸಕ ಕೃತ್ಯಗಳನ್ನು ನಡೆಸಬಹುದು ಎಂದು ಇತ್ತೀಚೆಗೆ ಉಕ್ರೇನ್ ಸರಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಪೂರ್ವ ಉಕ್ರೇನ್‌ನಲ್ಲಿ  ಉಕ್ರೇನ್ ಸೇನೆ ಹಾಗೂ ರಶ್ಯಾ ಬೆಂಬಲಿತ ಪ್ರತ್ಯೇಕವಾದಿಗಳ ಮಧ್ಯೆ 2014ರಿಂದಲೂ ಸಂಘರ್ಷ ನಡೆಯುತ್ತಿದೆ.

ಗುಂಡಿನ ದಾಳಿ ನಡೆಸಿದ ಬಳಿಕ ಬಂದೂಕುಧಾರಿ ಅಲ್ಲಿಂದ ಪರಾರಿಯಾಗಿದ್ದಾನೆ. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಆರ್ಟೆಮಿ ರ್ಯಾಬ್‌ಚುಕ್ ಎಂಬ ಶಂಕಿತ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು ಈತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದಿನ ಸೋವಿಯಟ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್, ತನ್ನ ಪ್ರಭಾವದ ವ್ಯಾಪ್ತಿಯೊಳಗೇ ಇರಬೇಕು ಎಂದು ರಶ್ಯಾ ಬಯಸುತ್ತಿದೆ. ಆದರೆ ಉಕ್ರೇನ್ ನೇಟೊದ ಸದಸ್ಯತ್ವ ಪಡೆಯಲು ಪ್ರಯತ್ನಿಸುತ್ತಿರುವುದು ರಶ್ಯಾದ ಕಣ್ಣು ಕೆಂಪಗಾಗಿಸಿದ್ದು ಈಗ ಉಕ್ರೇನ್ ಗಡಿಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಸೇನೆಯನ್ನು ಜಮಾವಣೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News