ಕಳೆದ 10 ವರ್ಷಗಳಿಂದ ಸರಕಾರಿ ಉದ್ಯೋಗಕ್ಕೆ ಕಾದು ಕೊನೆಗೆ ಆತ್ಮಹತ್ಯೆಗೈದ ಯುವಕ

Update: 2022-01-29 07:12 GMT
ನಾರಾಯಣ್ ಮೀನಾ

ಜೈಪುರ್: ಕಳೆದ ಹತ್ತು ವರ್ಷಗಳಿಂದ ಸರಕಾರಿ ನೌಕರಿಯೊಂದನ್ನು ಪಡೆಯಬೇಕೆಂದು ಹರಸಾಹಸ ಪಟ್ಟಿದ್ದ 28 ವರ್ಷದ ನಮೋ ನಾರಾಯಣ್ ಮೀನಾ ಎಂಬ ಯುವಕ ಇತ್ತೀಚೆಗೆ ಧೋಲ್ಪುರ್ ನಗರದ ತನ್ನ ಬಾಡಿಗೆ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಈ ಯುವಕ ಒಂದು ಡೆತ್ ನೋಟ್ ಅನ್ನೂ ಬರೆದಿಟ್ಟಿದ್ದು ರಾಜ್ಯದ ಹಿಂದಿನ ಬಿಜೆಪಿ ಸರಕಾರವು ಆಯುರ್ವೇದ ಕಂಪೌಂಡರ್ ಹುದ್ದೆಗಳಿಗೆ ನೇಮಕಾತಿ ಮಾಡುವುದಾಗಿ ಹೇಳಿದ್ದರೂ ಆ ನಿಟ್ಟಿನಲ್ಲಿ ಕ್ರಮಕೈಗೊಂಡಿಲ್ಲ ಎಂದು ದೂರಿದ್ದಾನೆ.

``ಸರಕಾರದ ಐದು ವರ್ಷಗಳು ಬರಗಾಲದಂತೆ ಕಳೆದುಹೋದವು. ನಾನು 2012ರಿಂದ ಕಾದು ನನ್ನ ಕುಟುಂಬದ ಹಣವನ್ನು ವ್ಯರ್ಥ ಮಾಡಿದೆ,'' ಎಂದು ಆತ ಬರೆದಿದ್ದಾನೆ.

ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರಕಾರ 20213ರಲ್ಲಿ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ನರ್ಸ್/ಕಂಪೌಂಡರ್ ಹುದ್ದೆಗಳು ಖಾಲಿಯಿವೆ ಎಂದು ಹೇಳಿತ್ತು ಆದರೆ ನಂತರ ಇವೆಲ್ಲವೂ ಆಯುಷ್ ಸಚಿವಾಲಯದಲ್ಲಿ ವಿಲೀನಗೊಳಿಸಲಾಗಿತ್ತು.

ಈ ಎಲ್ಲಾ ಖಾಲಿ ಹುದ್ದೆಗಳನ್ನು ಡಿಸೆಂಬರ್ 2013ರಲ್ಲಿ ಅಧಿಕಾರಕ್ಕೆ ಬಂದ ಹೊಸ ಬಿಜೆಪಿ ಸರಕಾರ ಈಡೇರಿಸುವುದಾಗಿ ತಿಳಿಸಿದ್ದರೂ 1000 ಹುದ್ದೆಗಳನ್ನು ಕೈಬಿಟ್ಟು 600 ಹುದ್ದೆಗಳಿಗೆ 2018ರಲ್ಲಿ ನೇಮಕಾತಿಗೊಳಿಸಿತ್ತು. ಹುದ್ದೆಗಳನ್ನು ಕಡಿತಗೊಳಿಸಿದ್ದರಿಂದ ಬಾಧಿತರಾಗಿದ್ದ ಹಲವರಲ್ಲಿ ನಮೋ ನಾರಾಯಣ್ ಕೂಡ ಸೇರಿದ್ದ.

ಮತ್ತೆ ಹೊಸ ಹುದ್ದೆಗಳು ಖಾಲಿಯಿದ್ದರೂ ಆಗ ಆತ ಜನರಲ್ ನರ್ಸಿಂಗ್ ಮತ್ತು ಮಿಡ್‍ವೈಫರ್ ಡಿಪ್ಲೋಮಾದಲ್ಲಿ ಗಳಿಸಿದ್ದ ಅಂಕಗಳು ಅದಕ್ಕೆ ಸಾಕಾಗಿರಲಿಲ್ಲ.

ಕಳೆದ ವರ್ಷ ಪರೀಕ್ಷೆಗೆ ಹಾಜರಾಗಿ ವಿಫಲನಾಗಿದ್ದಂದಿನಿಂದ ಆತ ಖಿನ್ನತೆಗೊಳಗಾಗಿದ್ದ ಎಂದು ಆತನ ಕುಟುಂಬ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News