"ಮೋದಿ ಸರಕಾರದಿಂದ ದೇಶದ್ರೋಹ": ಕೇಂದ್ರದಿಂದ ಪೆಗಾಸಸ್ ಸ್ಕೈವೇರ್ ಖರೀದಿ ವರದಿಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ
ಹೊಸದಿಲ್ಲಿ: ಇಸ್ರೇಲ್ ಜೊತೆಗಿನ ಒಪ್ಪಂದದ ಭಾಗವಾಗಿ ಭಾರತ ಸರಕಾರ 2017 ರಲ್ಲಿ ಇಸ್ರೇಲಿ ಗೂಢಚಾರಿಕೆ ತಂತ್ರಾಂಶ ಪೆಗಾಸಸ್ ಉಪಕರಣವನ್ನು ಖರೀದಿಸಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು, ರಾಜಕಾರಣಿಗಳು ಹಾಗೂ ಇತರರ ಮೇಲೆ ಕಣ್ಣಿಡಲು ಕೆಲವು ಸರಕಾರಗಳು ಪೆಗಾಸಸ್ ಸಾಫ್ಟ್ ವೇರ್ ಬಳಸುವುದರೊಂದಿಗೆ ಅದರ ಸೃಷ್ಟಿಕರ್ತ ಸಂಸ್ಥೆ ಎನ್ಎಸ್ ಒ ಗ್ರೂಪ್ ಹೆಸರು ಮುನ್ನಲೆಗೆ ಬಂದಿತ್ತು.
"ರಾಜ್ಯ ನಾಯಕರು ಹಾಗೂ ಸಾರ್ವಜನಿಕರ ಮೇಲೆ ಕಣ್ಣಿಡಲು ಮೋದಿ ಸರಕಾರ ಪೆಗಾಸಸ್ ಖರೀದಿಸಿದೆ. ಅವರು ಆಡಳಿತ ಪಕ್ಷ, ಪ್ರತಿಪಕ್ಷಗಳು, ನ್ಯಾಯಾಲಯವನ್ನು ಅವರ ಫೋನ್ ಕದ್ದಾಲಿಕೆ ಮಾಡುವ ಮೂಲಕ ಟಾರ್ಗೆಟ್ ಮಾಡಿದ್ದಾರೆ. ಇದು ದೇಶದ್ರೋಹ, ಮೋದಿ ಸರಕಾರ ದೇಶದ್ರೋಹ ಮಾಡಿದೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್‌ನ ಇತರ ನಾಯಕರು ಸಹ ವರದಿಯ ಬಗ್ಗೆ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿ, ‘ಮೋದಿ ಸರಕಾರ ಭಾರತದ ಶತ್ರುಗಳಂತೆ ವರ್ತಿಸಿದ್ದು ಭಾರತೀಯ ನಾಗರಿಕರ ವಿರುದ್ಧ ಯುದ್ಧ ಅಸ್ತ್ರವನ್ನು ಏಕೆ ಬಳಸಿದೆ? ಎಂದು ಕೇಳಿದ್ದಾರೆ.
"ಪೆಗಾಸಸ್ ಅನ್ನು ಬಳಸಿಕೊಂಡು ಅಕ್ರಮವಾಗಿ ಸ್ನೂಪಿಂಗ್ ಮಾಡುವುದು ದೇಶದ್ರೋಹಕ್ಕೆ ಸಮಾನವಾಗಿದೆ. ಯಾರೂ ಕಾನೂನಿಗಿಂತ ಮೇಲಲ್ಲ ಹಾಗೂ ನ್ಯಾಯವನ್ನು ಒದಗಿಸುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ" ಎಂದು ಅವರು ಹೇಳಿದರು.
ಮಾಧ್ಯಮ ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್ ವಕ್ತಾರೆ ಶಾಮಾ ಮೊಹಮ್ಮದ್, ಬಿಜೆಪಿ ಸರ್ಕಾರವು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಭಾರತದ ನಾಗರಿಕರ ಮೇಲೆ ಕಣ್ಣಿಡಲು ಮಿಲಿಟರಿ ದರ್ಜೆಯ ಸ್ಪೈವೇರ್ ಅನ್ನು ಬಳಸಿದೆ ಎಂಬುದಕ್ಕೆ ಇದು "ನಿರಾಕರಿಸಲಾಗದ ಪುರಾವೆ" ಎಂದು ಹೇಳಿದರು.