ರಾಯಚೂರು ಜಡ್ಜ್ ವಿಚಾರದಲ್ಲಿ ಹೈಕೋರ್ಟ್ ಕ್ರಮ: ಕಾಂಗ್ರೆಸ್
Update: 2022-01-29 14:13 IST
ಮಂಗಳೂರು, ಜ.29: ಗಣರಾಜ್ಯೋತ್ಸವ ಆಚರಣೆ ವೇಳೆ ರಾಯಚೂರು ನಗರದಲ್ಲಿ ಅಲ್ಲಿನ ನ್ಯಾಯಾಧೀಶರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅಗೌರವ ತೋರಿದ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನ್ಯಾಯಾಧೀಶರ ವರ್ತನೆ ಬಗ್ಗೆ ಸಾರ್ವಜನಿಕರಲ್ಲಿ ಬೇಸರ ಮತ್ತು ಆತಂಕ ಉಂಟಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರು ನ್ಯಾಯಾಂಗಕ್ಕೆ ವಿಶೇಷ ಗೌರವ ನೀಡುತ್ತಿದ್ದಾರೆ. ಆದರೆ ನ್ಯಾಯಾಧೀಶರಿಂದ ನಮ್ಮ ಸಂವಿಧಾನ ಶಿಲ್ಪಿ ಬಗ್ಗೆ ಅಗೌರವ ತೋರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಹೊಣೆಗಾರಿಕೆ ರಾಜ್ಯ ಹೈಕೋರ್ಟ್‌ನದ್ದಾಗಿದೆ. ಸುಪ್ರೀಂ ಕೋರ್ಟ್ ಕೂಡಾ ಈ ಘಟನೆಯನ್ನು ಅವಲೋಕಿಸುವ ವಿಶ್ವಾಸವಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.