ಭಾರತದ ಪ್ರಜಾಪ್ರಭುತ್ವ ಸುದೃಢವಾಗಿದೆ, ಯಾರಿಂದಲೂ ಪ್ರಮಾಣಪತ್ರ ಬೇಕಿಲ್ಲ: ವಿದೇಶಾಂಗ ವ್ಯವಹಾರಗಳ ಸಚಿವಾಲಯ
ಹೊಸದಿಲ್ಲಿ: ಭಾರತ ಒಂದು ಸುದೃಢ ಮತ್ತು ಸುಸ್ಥಿರ ಪ್ರಜಾಪ್ರಭುತ್ವವಾಗಿದ್ದು ಈ ನಿಟ್ಟಿನಲ್ಲಿ ದೇಶಕ್ಕೆ ಬೇರೆ ಯಾರಿಂದಲೂ ಪ್ರಮಾಣಪತ್ರ ಬೇಕಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಹೇಳಿದೆ.
ಬುಧವಾರ ನಡೆದ ವರ್ಚುವಲ್ ಚರ್ಚಾಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತು ಅಮೆರಿಕಾದ ನಾಲ್ಕು ಮಂದಿ ಸೆನೆಟರ್‍ಗಳು ಭಾರತದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ. ವರ್ಚುವಲ್ ಚರ್ಚಾಗೋಷ್ಠಿಯನ್ನು ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಆಯೋಜಿಸಿತ್ತು.
"ಈ ಸಮಾರಂಭದ ವರದಿಗಳನ್ನು ನಾವು ನೋಡಿದ್ದೇವೆ. ಇತರರು ನಮ್ಮ ಸಂವಿಧಾನವನ್ನು ರಕ್ಷಿಸುವ ಅಗತ್ಯವಿದೆ ಎಂಬ ಹೇಳಿಕೆ ಒಪ್ಪತಕ್ಕಂತಹುದಲ್ಲ" ಎಂದು ಸಚಿವಾಲಯದ ವಕ್ತಾರ ಅರಿಂದನ್ ಬಾಗ್ಚಿ ಹೇಳಿದ್ದಾರೆ.
ಈ ಕಾರ್ಯಕ್ರಮದ ಆಯೋಜಕರ ಹಿನ್ನೆಲೆ ಹಾಗೂ ಅದರಲ್ಲಿ ಭಾಗವಹಿಸಿದವರ ತಾರತಮ್ಯಕಾರಿ ನೀತಿ ಮತ್ತು ರಾಜಕೀಯ ಹಿತಾಸಕ್ತಿಗಳು ಎಲ್ಲರಿಗೂ ತಿಳಿದ ವಿಚಾರ ಎಂದು ಅವರು ಹೇಳಿದರು.
ಭಾರತದಲ್ಲಿ ಪ್ರಬಲವಾಗುತ್ತಿರುವ ಹಿಂದು ರಾಷ್ಟ್ರೀಯವಾದದ ಕುರಿತಂತೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಮೀದ್ ಅನ್ಸಾರಿ ಕಳವಳ ವ್ಯಕ್ತಪಡಿಸಿದ್ದರು.
ಚರ್ಚೆಯಲ್ಲಿ ಪಾಲ್ಗೊಂಡ ಡೆಮಾಕ್ರೆಟಿಕ್ ಸೆನೆಟರ್ ಎಡ್ ಮಾರ್ಕೆ, ಜಿಮ್ ಮೆಕ್‍ಗವರ್ನ್, ಆಂಡಿ ಲೆವಿನ್ ಮತ್ತು ಜೇಮೀ ರಸ್ಕಿನ್ ಕೂಡ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಅಡಿಯಲ್ಲಿ ಮಾನವ ಹಕ್ಕುಗಳ ಸ್ಥಿತಿಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.