ಪಾಕಿಸ್ತಾನದಲ್ಲಿರುವ ಸೋದರನೊಂದಿಗೆ ಕಾಲ ಕಳೆಯಲು ವೃದ್ಧ ಸಿಖಾ ಖಾನ್ ಗೆ 2 ತಿಂಗಳ ವೀಸಾ ಒದಗಿಸಿದ ಪಾಕ್ ಹೈಕಮಿಷನ್
ಚಂಡೀಗಢ: ದೇಶ ವಿಭಜನೆಯ ಸಂದರ್ಭ ಬೇರ್ಪಟ್ಟು ಇತ್ತೀಚೆಗೆ 74 ವರ್ಷಗಳ ನಂತರ ಪಾಕಿಸ್ತಾನದ ಕರ್ತಾರ್ಪುರ್ ಗುರುದ್ವಾರದಲ್ಲಿ ಭೇಟಿಯಾದ ಇಬ್ಬರು ಸೋದರರು ಕೆಲವು ವಾರಗಳ ಕಾಲ ಜತೆಯಾಗಿ ಕಳೆಯುವ ಅವಕಾಶ ಪಡೆದಿದ್ದಾರೆ.
ಪಂಜಾಬ್‍ನ ಭಟಿಂಡಾ ಜಿಲ್ಲೆಯ ಫುಲೆವಾಲ ಗ್ರಾಮದ ಸಿಕಾ ಖಾನ್ ಅವರಿಗೆ ಪಾಕಿಸ್ತಾನದ ಫೈಸಲಾಬಾದ್‍ನಲ್ಲಿರುವ ತಮ್ಮ ಸೋದರ ಮುಹಮ್ಮದ್ ಸಿದ್ದೀಖ್ ಅವರನ್ನು ಭೇಟಿಯಾಗಲು ಎರಡು ತಿಂಗಳ ವೀಸಾ ಅನ್ನು ದಿಲ್ಲಿಯಲ್ಲಿರುವ ಪಾಕಿಸ್ತಾನ್ ಹೈಕಮಿಷನ್ ಒದಗಿಸಿದೆ.
ಇಬ್ಬರು ಸೋದರರು ಕರ್ತಾರ್ಪುರ್ ಕಾರಿಡಾರಿನಲ್ಲಿ ಪರಸ್ಪರ ಭೇಟಿಯಾದಾಗ ಆಲಂಗಿಸಿ, ಆನಂದಬಾಷ್ಪ ಸುರಿಸಿದ ವೀಡಿಯೋ ವೈರಲ್ ಆದ ನಂತರದ ಬೆಳವಣಿಗೆ ಇದಾಗಿದೆ. ಆದರೆ ಆ ಸಂದರ್ಭ ಇಬ್ಬರೂ ಒಂದು ಗಂಟೆಗಿಂತ ಹೆಚ್ಚು ಕಾಲ ಒಟ್ಟಿಗೆ ಕಾಲ ಕಳೆಯುವುದು ಸಾಧ್ಯವಾಗಿಲಿಲ್ಲ.
ಸಿಕಾ ಅವರಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಲು ಅನುವಾಗಲು ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಶ್ರಮವಹಿಸಿದ್ದಾರೆ. ಅವರು ಮುಂದಿನ ಎರಡು ಮೂರು ದಿನಗಳಲ್ಲಿ ಪಾಕಿಸ್ತಾನಕ್ಕೆ ತೆರಳಲಿದ್ದಾರೆ. ಅವರ ಸೋದರನ ಕುಟುಂಬ ಅವರನ್ನು ವಾಘಾ ಗಡಿಯಲ್ಲಿ ಎದುರುಗೊಂಡು ನಂತರ ಅವರನ್ನು ಫೈಸಲಾಬಾದ್‍ಗೆ ಕರೆದೊಯ್ಯಲಿದೆ.
ಇತ್ತೀಚೆಗೆ ಸೋದರನನ್ನು ಭೇಟಿಯಾಗುವ ಸಮಯ ನೀಡಲೆಂದು ಕೊಂಡು ಹೋಗಿದ್ದ ಕೆಲ ಉಡುಗೊರೆಗಳು ದಾರಿಮಧ್ಯೆ ಕಳೆದುಹೋಗಿದ್ದರಿಂದ ಈ ಬಾರಿ ಬಳೆ, ಬಟ್ಟೆಬರೆಗಳನ್ನು ಕೊಂಡೊಯ್ಯುತ್ತೇನೆ, ಅವರು ಖಂಡಿತ ಖುಷಿ ಪಡಲಿದ್ದಾರೆ ಎಂದು ಸಿಕಾ ಖಾನ್ ಹೇಳಿದ್ದಾರೆ.