ತೊಕ್ಕೊಟ್ಟು ಸೇತುವೆ- ಉಳ್ಳಾಲ ರಸ್ತೆಗೆ ವೀರರಾಣಿ ಅಬ್ಬಕ್ಕ ನಾಮಕರಣಕ್ಕೆ ಆಗ್ರಹ
ಮಂಗಳೂರು, ಜ.29: ತೊಕ್ಕೊಟ್ಟು ಓವರ್‌ಬ್ರಿಡ್ಜ್‌ನಿಂದ ಉಳ್ಳಾಲಕ್ಕೆ ತೆರಳುವ ರಸ್ತೆಗೆ ವೀರ ರಾಣಿ ಅಬ್ಬಕ್ಕ ರಸ್ತೆ ಹಾಗೂ ಉಳ್ಳಾಲಕ್ಕೆ ತೆರಳುವ ಮುಖ್ಯ ತಿರುವು ಓವರ್‌ಬ್ರಿಡ್ಜ್ ಬಳಿ ವೀರರಾಣಿ ಅಬ್ಬಕ್ಕ ಸ್ವಾಗತ ಕಮಾನು ನಿರ್ಮಿಸಬೇಕು ಎಂದು ವಿಶ್ವಹಿಂದು ಪರಿಷತ್, ಬಜರಂಗದಳ ಆಗ್ರಹಿಸಿದೆ.
ಅಬ್ಬಕ್ಕ ರಾಣಿ ಉಳ್ಳಾಲದ ಸರ್ವಧರ್ಮದವರು ಗೌರವಿಸುತ್ತಿರುವ ಹೆಮ್ಮೆಯ ರಾಣಿ. ಅವರ ಹೆಸರು ಚಿರಕಾಲ ಉಳಿಯಲು ತೊಕ್ಕೊಟ್ಟು- ಉಳ್ಳಾಲ ರಸ್ತೆಗೆ ಉಳ್ಳಾಲದ ವೀರರಾಣಿ ಅಬ್ಬಕ್ಕ ರಸ್ತೆ, ವೀರರಾಣಿ ಅಬ್ಬಕ್ಕನ ನಾಡು ಉಳ್ಳಾಲಕ್ಕೆ ಸ್ವಾಗತ ಎಂಬ ಹೆಸರಿನ ಸ್ವಾಗತ ಕಮಾನು ನಿರ್ಮಿಸಬೇಕು ಎಂದು ಆಗ್ರಹಿಸಿ ಉಳ್ಳಾಲ ನಗರಸಭಾ ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಧಿಕಾರಿ ಅವರು ನಮ್ಮ ಮನವಿ ಪರಿಗಣಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲು ನಗರಸಭೆಗೆ ಸೂಚಿಸಬೇಕು ಎಂದು ಬಜರಂಗದಳ ಮಂಗಳೂರು ಜಿಲ್ಲಾ ಸಹ ಸಂಚಾಲಕ ಗುರುಪ್ರಸಾದ್ ಉಳ್ಳಾಲ ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರು ಇರಿಸಬೇಕೆಂದು ವಿಶ್ವಹಿಂದು ಪರಿಷತ್, ಬಜರಂಗದಳ ಬಹಳ ಹಿಂದಿನಿಂದಲೇ ಒತ್ತಾಯ, ಹೋರಾಟ ನಡೆಸುತ್ತಿದೆ. ಪ್ರಸ್ತುತ ಬಜರಂಗದಳ ವತಿಯಿಂದ ಅಲ್ಲಿ ‘ಬ್ರಹ್ಮಶ್ರೀ ನಾರಾಯಣಗುರು ವೃತ್ತ’ ಎಂಬ ಬೋರ್ಡ್ ಅಳವಡಿಸಿದ್ದೇವೆ. ಬಿರುವೆರ್ ಕುಡ್ಲ ಸಂಘಟನೆ ಕೂಡಾ ಅಲ್ಲಿ ಬೋರ್ಡ್ ಅವಳಡಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಈ ವಿಚಾರದಲ್ಲಿ ಬಿರುವೆರ್ ಕುಡ್ಲ ಹೋರಾಟಕ್ಕೆ ವಿಹಿಂಪ, ಬಜರಂಗದಳದ ಬೆಂಬಲ ಇದೆ. ಸರಕಾರ ಕೂಡಲೇ ನಮ್ಮ ಒತ್ತಾಯ ಮನ್ನಿಸಿ, ಬ್ರಹ್ಮಶ್ರೀ ನಾರಾಯಣಗುರು ವೃತ್ತವೆಂದು ನಾಮಕರಣ ಮಾಡಬೇಕು ಎಂದು ಗುರುಪ್ರಸಾದ್ ಉಳ್ಳಾಲ ಒತ್ತಾಯಿಸಿದರು.
ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ವಿಹಿಂಪ ಉಳ್ಳಾಲ ಕಾರ್ಯದರ್ಶಿ ಶೈಲೇಶ್ ಅಡ್ಕಘಿ, ಬಜರಂಗದಳ ಉಳ್ಳಾಲ ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಉಪಸ್ಥಿತರಿದ್ದರು.
ಉಳ್ಳಾಲಬೈಲ್‌ನಲ್ಲಿ ಬ್ಯಾನರ್ ಅಳವಡಿಕೆ ಪ್ರಕರಣ: ಫತ್ವಾ ಹೊರಡಿಸಿಲ್ಲ ಎಂದ ಬಜರಂಗದಳ
ಹಿಂದುಗಳ ಬಳಿ ಮಾತ್ರ ವ್ಯಾಪಾರ ನಡೆಸಿ ಎಂದು ಉಳ್ಳಾಲಬೈಲ್‌ನಲ್ಲಿ ಬ್ಯಾನರ್ ಅಳವಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದು ಧರ್ಮದ ನಂಬಿಕೆ, ದೇವರನ್ನು ಅವಹೇಳನ, ಅಪವಿತ್ರ ಮಾಡುವವರ ಬಳಿ ವ್ಯಾಪಾರ ವ್ಯವಹಾರ ನಡೆಸಬೇಡಿ ಎಂದು ಹಿಂದು ಬಾಂಧವರನ್ನು ವಿನಂತಿಸಿ ಬಜರಂಗದಳ ಬ್ಯಾನರ್ ಅಳವಡಿಸಿದೆ. ಈ ಬಗ್ಗೆ ಯಾವುದೇ ಒತ್ತಾಯ, ಆದೇಶ, ಫತ್ವಾ ಹೊರಡಿಸಿಲ್ಲ. ನಮ್ಮ ವಿನಂತಿಗೆ ಉತ್ತಮ ಸ್ಪಂದನೆ ದೊರೆತಿದೆ ಎಂದರು.