ಮಾರ್ಚ್ ನಿಂದ ಉಳ್ಳಾಲ ತಾಲೂಕು ಕಚೇರಿ ನಾಟೆಕಲ್ ನಲ್ಲಿ ಸಾರ್ವಜನಿಕ ಸೇವೆಗೆ ಲಭ್ಯ: ಶಾಸಕ ಯು.ಟಿ. ಖಾದರ್
ಮಂಗಳೂರು, ಜ.29: ಉಳ್ಳಾಲ ತಾಲೂಕು ಕಚೇರಿ ಮಾರ್ಚ್‌ನಿಂದ ನಾಟೆಕಲ್‌ನಲ್ಲಿರುವ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ತಾತ್ಕಾಲಿಕವಾಗಿ ತಾಲೂಕು ಕಚೇರಿಯನ್ನು ನಾಟೆಕಲ್‌ನಲ್ಲಿ ಆರಂಭಿಸಲಾಗುವುದು. ಅದಕ್ಕಾಗಿ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ನವೀಕರಣ ಕಾಮಗಾರಿ ಸೋಮವಾರದಿಂದಲೇ ಆರಂಭವಾಗಲಿದೆ. ಈ ಕಾಮಗಾರಿ ಮುಗಿದ ಕೂಡಲೆ ಮಾರ್ಚ್ ಆರಂಭದಲ್ಲಿ ಕಚೇರಿ ಸಾರ್ವಜನಿಕರಿಗೆ ಸೇವೆಗೆ ಲಭ್ಯವಾಗಲಿದೆ ಎಂದು ಹೇಳಿದರು.
ಮೇರಮಜಲು, ಕೊಡ್ಮಣ್ಣು, ಪುದು, ತುಂಬೆ ಗ್ರಾಮಗಳು ಉಳ್ಳಾಲ ತಾಲೂಕಿಗೆ ಸೇರಿದರೂ ಆ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸದ್ಯದ ಮಟ್ಟಿಗೆ ಬಂಟ್ವಾಳ ತಾಲೂಕಿನಲ್ಲೇ ಮುಂದುವರಿಸಲಾಗುವುದು. ಸಜಿಪ- ತುಂಬೆ ಸೇತುವೆ ಕಾಮಗಾರಿ ಮುಗಿದ ಬಳಿಕ ಈ ಗ್ರಾಮಗಳನ್ನು ಉಳ್ಳಾಲ ತಾಲೂಕಿಗೆ ಸೇರಿಸಲು ಉದ್ದೇಶಿಸಲಾಗಿದೆ ಎಂದು ಖಾದರ್ ಹೇಳಿದರು.
ಬಜೆಟ್‌ನಲ್ಲಿ ಘೋಷಣೆಯಾಗದೆ, ಕ್ಯಾಬಿನೆಟ್‌ಗೆ ಬಾರದೆ, ಯಾರಿಂದಲೂ ಬೇಡಿಕೆ- ಮನವಿಗಳೇ ಇಲ್ಲದೆ ನೇರವಾಗಿ ಉಳ್ಳಾಲ ತಾಲೂಕು ಘೋಷಣೆ ಮಾಡಿದ್ದು ದೇಶದಲ್ಲಿ ಇದೇ ಮೊದಲು ಎಂದು ಹೇಳಿದ ಅವರು, ಈ ತಾಲೂಕು ಕಚೇರಿ ಆರಂಭದಿಂದ ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂದರು.
ಉಳ್ಳಾಲ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆ ಸೇವೆ
ಉಳ್ಳಾಲ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಅಲಭ್ಯತೆ ಸಮಸ್ಯೆ ನೀಗಿಸಲು ಇದೀಗ ಯೇನೆಪೋಯ ಮೆಡಿಕಲ್ ಕಾಲೇಜಿನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರದಿಂದ ಅನುಮತಿ ದೊರೆತಿದೆ. ಇನ್ನು ಈ ಆಸ್ಪತ್ರೆಯಲ್ಲಿ ಎಲ್ಲ ಸೆಕೆಂಡರಿ ಕೇರ್ ಚಿಕಿತ್ಸಾ ಸೇವೆಗಳನ್ನು ಉಚಿತವಾಗಿ ಯೇನೆಪೋಯ ಮೆಡಿಕಲ್ ಕಾಲೇಜು ನೀಡಲಿದೆ. ಅಲ್ಲದೆ, 12 ಬೆಡ್‌ಗಳುಳ್ಳ ಡಯಾಲಿಸಿಸ್ ಕೇಂದ್ರವನ್ನು ಖಾಸಗಿ ಸಹಕಾರದಲ್ಲಿ ವ್ಯವಸ್ಥೆಗೊಳಿಸಿ ಅದರ ನಿರ್ವಹಣೆ ಮತ್ತು ಟೆಕ್ನೀಶಿಯನ್‌ಗಳನ್ನು ಯೇನೆಪೋಯ ಕಾಲೇಜು ವ್ಯವಸ್ಥೆಗೊಳಿಸಲಿದೆ ಎಂದು ಶಾಸಕ ಖಾದರ್ ತಿಳಿಸಿದರು.