ಹಸಿವಿನ ಸಂಕಟ ತಾಳಲಾರದೆ ಮಕ್ಕಳನ್ನು, ಅಂಗಾಂಗಗಳನ್ನು ಮಾರಾಟ ಮಾಡುತ್ತಿರುವ ಅಫ್ಘಾನ್ ಜನತೆ: ವಿಶ್ವಸಂಸ್ಥೆ ಕಳವಳ‌

Update: 2022-01-29 16:02 GMT
ಸಾಂದರ್ಭಿಕ ಚಿತ್ರ:PTI

ಬರ್ಲಿನ್, ಜ.29: ಅಫ್ಘಾನಿಸ್ತಾನದಲ್ಲಿ ಮಾನವೀಯ ಬಿಕ್ಕಟ್ಟು ಪರಾಕಾಷ್ಟೆಗೆ ತಲುಪಿದ್ದು ಹಸಿವಿನ ಸಂಕಟ ತಾಳಲಾರದೆ ಅಲ್ಲಿನ ಜನತೆ ತಮ್ಮ ಮಕ್ಕಳನ್ನು, ದೇಹದ ಭಾಗಗಳನ್ನು ಮಾರಾಟ ಮಾಡುವ ಸ್ಥಿತಿ ಬಂದಿದೆ ಎಂದು ವಿಶ್ವ ಆರೋಗ್ಯ ಯೋಜನೆ(ಡಬ್ಲ್ಯೂಇಎಫ್)ಯ ಮುಖ್ಯಸ್ಥ ಡೇವಿಡ್ ಬ್ಯಾಸೆಲಿ ಕಳವಳ ವ್ಯಕ್ತಪಡಿಸಿದ್ದಾರೆ.

ದೀರ್ಘಾವಧಿಯ ಸಂಘರ್ಷ, ಬರಗಾಲ, ಕೊರೋನ ಸೋಂಕು, ಅರ್ಥವ್ಯವಸ್ಥೆಯ ಕುಸಿತ ಇತ್ಯಾದಿ ಸರಣಿ ಸಮಸ್ಯೆಗಳಿಂದ ಅಫ್ಘಾನಿಸ್ತಾನ ಕಂಗೆಟ್ಟಿದೆ. ದೇಶದ ಜನಸಂಖ್ಯೆಯ ಅರ್ಧಾಂಶಕ್ಕೂ ಅಧಿಕ ಜನತೆಗೆ ಆಹಾರ ಕೊರತೆ ಎದುರಾಗಿರುವುದರಿಂದ ಅಂತರಾಷ್ಟ್ರೀಯ ಸಮುದಾಯ ಆ ದೇಶಕ್ಕೆ ತಕ್ಷಣ ನೆರವು ವಿತರಣೆಯನ್ನು ತ್ವರಿತಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಅಫ್ಘಾನ್‌ನ ಸುಮಾರು 24 ಮಿಲಿಯನ್ ಜನತೆಗೆ ತೀವ್ರ ಆಹಾರದ ಅಭದ್ರತೆ ಕಾಡುತ್ತಿದ್ದು ಈ ಚಳಿಗಾಲದಲ್ಲಿ ದೇಶದ ಒಟ್ಟು ಜನಸಂಖ್ಯೆಯ 50%ಕ್ಕೂ ಅಧಿಕ ಮಂದಿ ಈ ವರ್ಷ ಬರಗಾಲದ ಪರಿಸ್ಥಿತಿಗೆ ಸಿಲುಕಲಿದ್ದಾರೆ. ಅಲ್ಲದೆ ಜನಸಂಖ್ಯೆಯ 97%ದಷ್ಟು ಮಂದಿ ಈ ವರ್ಷ ಬಡತನ ರೇಖೆಗಿಂತ ಕೆಳಮಟ್ಟಕ್ಕೆ ತಲುಪಲಿದ್ದಾರೆ. ತಾಲಿಬಾನ್ನೊಂದಿಗಿನ ಸುಮಾರು 20 ವರ್ಷದ ಸಂಘರ್ಷದ ಪರಿಣಾಮ ಅಫ್ಘಾನಿಸ್ತಾನ ಈಗಾಗಲೇ ವಿಶ್ವದ ಅತ್ಯಂತ ಬಡದೇಶಗಳ ಪಟ್ಟಿಯಲ್ಲಿದೆ ಮತ್ತು ಈಗ ದುರಂತದ ಅಂಚಿನಲ್ಲಿದೆ. 40 ಮಿಲಿಯನ್ ಜನಸಂಖ್ಯೆಯಿರುವ ದೇಶದಲ್ಲಿ ಸುಮಾರು 23 ಮಿಲಿಯನ್ ಜನತೆಗೆ ಆಹಾರದ ಕೊರತೆ ಎದುರಾಗಿದೆ ಎಂದವರು ಹೇಳಿದ್ದಾರೆ.

ಜರ್ಮನ್ ನ ಟಿವಿ ವಾಹಿನಿ ಡ್ಯೂಷ್ ವೆಲ್ಲೆ(ಡಿಡಬ್ಲ್ಯೂ)ಗೆ ನೀಡಿದ ಸಂದರ್ಶನದಲ್ಲಿ ಅವರು ತಾನು ಅಫ್ಘಾನಿಸ್ತಾನದಲ್ಲಿ ಭೇಟಿಯಾದ ಮಹಿಳೆಯೊಬ್ಬರ ಬಗ್ಗೆ ಉಲ್ಲೇಖಿಸಿದರು. ಆರ್ಥಿಕ ಸಂಕಷ್ಟ ಮತ್ತು ಆಹಾರದ ಕೊರತೆಯಿಂದ ಕಂಗೆಟ್ಟಿದ್ದ ಆ ಮಹಿಳೆ ತನ್ನ ಪುತ್ರಿಯನ್ನು ಮತ್ತೊಂದು ಕುಟುಂಬಕ್ಕೆ ಮಾರಿದ್ದಾಳೆ. ಅಲ್ಲಾದರೂ ಮಗಳು ನೆಮ್ಮದಿಯಿಂದ ಬದುಕಲಿ ಎಂಬ ಕಾಳಜಿಯಿಂದ ಹೀಗೆ ಮಾಡಿದ್ದಳು ಎಂದವರು ಹೇಳಿದ್ದಾರೆ. ವಿಶ್ವದ ಅಗರ್ಭ ಶ್ರೀಮಂತರು ಅಫ್ಘಾನಿಸ್ತಾನ ಎದುರಿಸುತ್ತಿರುವ ಆಹಾರದ ಸಮಸ್ಯೆಗೆ ಪರಿಹಾರ ರೂಪಿಸಲು ಮುಂದಾಗಬೇಕು. ಕೊರೋನ ಸೋಂಕಿನ ಸಂದರ್ಭ ವಿಶ್ವದ ಕೋಟ್ಯಾಧಿಪತಿಗಳು ಅಪಾರ ಸಂಪತ್ತು ಗಳಿಸಿದ್ದು ಇವರ ಸಂಪತ್ತಿನಲ್ಲಿ ದಿನಕ್ಕೆ 5.2 ಬಿಲಿಯನ್ ಡಾಲರ್‌ಗೂ ಅಧಿಕ ಹೆಚ್ಚಳವಾಗಿದೆ. ಇವರ ಒಂದು ದಿನದ ಆದಾಯ ಅಫ್ಘಾನ್‌ನ ಅಲ್ಪಾವಧಿಯ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಸಾಕಾಗುತ್ತದೆ ಎಂದು ಬ್ಯಾಸೆಲಿ ಹೇಳಿದ್ದಾರೆ.

ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ಇಟಲಿ, ನಾರ್ವೆ, ಬ್ರಿಟನ್ ಮತ್ತು ಅಮೆರಿಕದ ವಿಶೇಷ ಪ್ರತಿನಿಧಿಗಳು ಜನವರಿ 4ರಂದು ನಾರ್ವೆಯ ಓಸ್ಲೋದಲ್ಲಿ ಸಭೆ ಸೇರಿ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದರು. ಬಳಿಕ ನೀಡಿದ ಜಂಟಿಹೇಳಿಕೆಯಲ್ಲಿ ಅಫ್ಘಾನಿಸ್ತಾನದಲ್ಲಿನ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿಗೆ ಪರಿಹಾರ ರೂಪಿಸುವ ತುರ್ತು ಅಗತ್ಯ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಒತ್ತಿಹೇಳಲಾಗಿದೆ. ಜತೆಗೆ, ಮಾನವೀಯ ನೆರವು ಒದಗಿಸುತ್ತಿರುವ ಸಂಘಟನೆಗಳ ಕಾರ್ಯಕರ್ತರಿಗೆ, ಮಹಿಳೆಯರೂ ಸೇರಿದಂತೆ, ಅಫ್ಘಾನ್‌ನಲ್ಲಿ ಮುಕ್ತ ಮತ್ತು ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಅಲ್ಲಿನ ಆಡಳಿತವನ್ನು ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News