ಸಹಕಾರಿ ಕಾಯ್ದೆಗೆ ತಿದ್ದುಪಡಿಗೆ ಮುಂದಿನ ಅಧಿವೇಶನದಲ್ಲಿ ಕ್ರಮ: ಸಚಿವ ಸೋಮಶೇಖರ್

Update: 2022-01-30 13:16 GMT

ಮಂಗಳೂರು, ಜ. 30: ಸಹಕಾರಿ ಕಾಯ್ದೆಯಲ್ಲಿನ ಕೆಲವೊಂದು ಅಂಶಗಳನ್ನು ಈಗಾಗಲೇ ತಿದ್ದುಪಡಿ ಮಾಡಲಾಗಿದೆ. ಉಳಿದ ತಿದ್ದುಪಡಿಗಳ ಬಗ್ಗೆ ಸಹಕಾರಿ ಕ್ಷೇತ್ರದ ಪ್ರಮುಖರು ಬೇಡಿಕೆ ಮಂಡಿಸಿದ್ದು, ಮುಂದಿನ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ರವಿವಾರ ಮಂಗಳೂರಿನ ಪಡೀಲ್ ಬೈರಾಡಿಕೆರೆ ಬಳಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಧಾನ ಕಚೇರಿ ‘ಆತ್ಮಶಕ್ತಿ ಸೌಧ’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೊಡ್ಡ ಮೊತ್ತದ ಸಹಕಾರಿ ಸಾಲ ಮರು ಪಾವತಿಸದೆ ಸುಸ್ತಿದಾರರಾಗುವವರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಇರುವ ವಿಚಾರ, ಸಹಕಾರಿ ಸಂಸ್ಥೆಯ ನಿರ್ದೇಶಕರಾದವರು ಅನಿರೀಕ್ಷಿತವಾಗಿ ಅಧಿಕಾರಾವಧಿಯ ಎರಡುವರೆ ವರ್ಷದೊಳಗೆ ಸಾವನ್ನಪ್ಪಿದರೆ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಸುವುದು ಮತ್ತಿತರ ಕೆಲವು ಅಂಶಗಳು ತಿದ್ದುಪಡಿ ಪ್ರಸ್ತಾವದಲ್ಲಿರುವ ಪ್ರಮುಖ ವಿಷಯಗಳಾಗಿವೆ ಎಂದರು.

ಕೇಂದ್ರ ಸರಕಾರದ ಮಟ್ಟದಲ್ಲಿ ತಿದ್ದುಪಡಿ ಮಾಡಬೇಕಾದ ಏಳೆಂಟು ಅಂಶಗಳನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ ಎಂದರು.

ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ 5,000 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಈಗಾಗಲೇ 3,000 ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ. ಉಳಿದ 2,000 ಹುದ್ದೆಗಳಿಗೆ ಶೀಘ್ರ ನೇಮಕಾತಿ ಮಾಡಲಾಗುವುದು. ಮಂಗಳೂರಿನ ಡೈರಿಯಲ್ಲಿ 60-70 ಹುದ್ದೆಗಳು, ಉಳಿದಂತೆ ಡಿಸಿಸಿ ಬ್ಯಾಂಕ್‌ಗಳು, ನಗರ ಸಹಕಾರಿ ಸಂಘಗಳಲ್ಲಿ ಕೂಡ ಹುದ್ದೆಗಳು ಖಾಲಿ ಇವೆ ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News