×
Ad

ಮಹಾತ್ಮಾ ಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದನ ಉಪಸ್ಥಿತಿ ವಿರೋಧಿಸಿ ವೇದಿಕೆಯಿಂದ ನಿರ್ಗಮಿಸಿದ ಸಚಿವ

Update: 2022-01-30 19:40 IST
ಜ್ಯೋತಿಪ್ರಿಯ ಮಲಿಕ್(photo:twitter/@JyotipriyaMLA)
 

ಕೋಲ್ಕತಾ,ಜ.30: ಪಶ್ಚಿಮ ಬಂಗಾಳದ ಅರಣ್ಯ ಸಚಿವ ಜ್ಯೋತಿಪ್ರಿಯ ಮಲಿಕ್ ಅವರು ಬರಾಕ್‌ಪುರ ಪ್ರದೇಶದಲ್ಲಿ ರವಿವಾರ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧಿಯವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಸಂಸದ ಅರ್ಜುನ ಸಿಂಗ್ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ನಿರಾಕರಿಸಿ ನಿರ್ಗಮಿಸಿದ ಘಟನೆ ನಡೆದಿದೆ.

ರಾಜ್ಯಪಾಲ ಜಗದೀಪ ಧಂಖರ್ ಅವರ ಪಕ್ಕದಲ್ಲಿ ಆಸೀನರಾಗಿದ್ದ ಮಲಿಕ್ ಅರ್ಜುನ ಸಿಂಗ್ ಆಗಮಿಸಿದಾಗ ಏಕಾಏಕಿ ವೇದಿಕೆಯಿಂದ ಕೆಳಗಿಳಿದರು. ಕೆಳಗೆ ಇಳಿದಿದ್ದೇಕೆ ಎಂದು ರಾಜ್ಯಪಾಲರು ಪ್ರಶ್ನಿಸಿದಾಗ,‘ವೃತ್ತಿಪರ ಹಂತಕನೋರ್ವ ನಿಮ್ಮ ಪಕ್ಕದಲ್ಲಿ ಕುಳಿತಿರುವುದನ್ನು ಪ್ರತಿಭಟಿಸಿ ನಾನು ವೇದಿಕೆಯನ್ನು ತೊರೆಯುತ್ತಿದ್ದೇನೆ. ನಾನು ಸಭಿಕರೊಂದಿಗೆ ಕುಳಿತುಕೊಳ್ಳುತ್ತೇನೆ ’ ಎಂದು ಮಲಿಕ್ ಉತ್ತರಿಸಿದ್ದು ಕೇಳಿಬಂದಿತ್ತು.

ಶನಿವಾರ ರಾತ್ರಿ ಬರಾಕ್‌ಪುರದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಟಿಎಂಸಿ ನಾಯಕ ಗೋಪಾಲ ಮಜುಮ್ದಾರ್ ಹತ್ಯೆಯ ಹಿನ್ನೆಲೆಯಲ್ಲಿ ಮಲಿಕ್ ಅವರ ಹೇಳಿಕೆ ಹೊರಬಿದ್ದಿತ್ತು.

ಸಿಂಗ್ ಮಜುಮ್ದಾರ್ ಹತ್ಯೆಯ ಹಿಂದಿನ ರೂವಾರಿಯಾಗಿದ್ದಾರೆ ಎಂದು ಆಡಳಿತ ಟಿಎಂಸಿ ಆರೋಪಿಸಿದ್ದರೆ,ಟಿಎಂಸಿಯೊಳಗಿನ ಆಂತರಿಕ ಕಲಹ ಹತ್ಯೆಗೆ ಕಾರಣವಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಮಜುಮ್ದಾರ್ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿಜಯ ಮುಖ್ಯೋಪಾಧ್ಯಾಯರನ್ನು ರವಿವಾರ ಬೆಳಿಗ್ಗೆ ಬಂಧಿಸಲಾಗಿದೆ. ಮಜುಮ್ದಾರ್ ಅವರು ಮನೆಗೆ ಮರಳುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಿ,ಹಲವಾರು ಬಾರಿ ಇರಿಯಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

‘ನಾವು ಪ್ರಜಾಪ್ರಭುತ್ವದಲ್ಲಿ ಮತ್ತು ಮಹಾತ್ಮಾ ಗಾಂಧಿಯವರು ಬೋಧಿಸಿರುವ ಅಹಿಂಸೆಯಲ್ಲಿ ನಂಬಿಕೆಯನ್ನು ಹೊಂದಿದ್ದೇವೆ. ಟಿಎಂಸಿ ನಮ್ಮ ಮೇಲೆ ಹಿಂಸಾಚಾರವನ್ನು ನಡೆಸುತ್ತಿದೆ ಮತ್ತು ಬಣ ಕಲಹದಲ್ಲಿ ತನ್ನದೇ ಪಕ್ಷದ ಸದಸ್ಯರನ್ನು ಕೊಲ್ಲುತ್ತಿದೆ ’ಎಂದ ಸಿಂಗ್,ಮಲಿಕ್ ನಡೆಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.

ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್,‘ಶಿಷ್ಟಾಚಾರದಂತೆ ನಾನು ರಾಜ್ಯ ಸರಕಾರವನ್ನು ಪ್ರತಿನಿಧಿಸಿದ್ದೆ. ಆದರೆ ನಾವು ಆರೋಪಗಳನ್ನು ದಾಖಲಿಸಿರುವ ಮತ್ತು ತನಿಖೆ ಬಾಕಿಯುಳಿದಿರುವ ಕೊಲೆಗಳ ರೂವಾರಿಯೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಸಾಧ್ಯವಿರಲಿಲ್ಲ. ನಾನು ಕಾರ್ಯಕ್ರಮವನ್ನು ಅರ್ಧಕ್ಕೇ ತೊರೆದಿರಲಿಲ್ಲ,ನಾನು ಸಭಿಕರೊಂದಿಗೆ ಕುಳಿತುಕೊಂಡಿದ್ದೆ ’ಎಂದರು.

ಮಲಿಕ್‌ಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ದೇಬಜಿತ್ ಸರ್ಕಾರ್ ಅವರು,ಟಿಎಂಸಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಮತ್ತು ಸರಕಾರಿ ಸಮಾರಂಭದಲ್ಲಿ ಜನ ಪ್ರತಿನಿಧಿಯೋರ್ವರ ಚಾರಿತ್ರ ಹನನದಲ್ಲಿ ತೊಡಗಲು ಅದಕ್ಕೆ ಹಕ್ಕು ಇಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News