ಉತ್ತರಪ್ರದೇಶ: 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ವೈದ್ಯನ 8 ವರ್ಷದ ಪುತ್ರ ಶವವಾಗಿ ಪತ್ತೆ
ಬುಲಂದ್‌ಶಹರ್: ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ವೈದ್ಯರೊಬ್ಬರ ಎಂಟು ವರ್ಷದ ಮಗನ ಮೃತದೇಹವನ್ನು ಬುಲಂದ್‌ಶಹರ್ ಪೊಲೀಸರು ರವಿವಾರ ಪತ್ತೆ ಮಾಡಿದ್ದಾರೆ.
ಶುಕ್ರವಾರ ರಾತ್ರಿ ಬಾಲಕನನ್ನು ಅಪಹರಿಸಿ ಕೊಂದ ಆರೋಪದಲ್ಲಿ ಬಂಧಿತರಾಗಿರುವ ವೈದ್ಯರ ವಜಾಗೊಂಡ ಇಬ್ಬರು ನೌಕರರಾದ ನಿಜಾಮ್ ಮತ್ತು ಶಾಹಿದ್ ನೀಡಿದ ಮಾಹಿತಿಯಂತೆ ಬಾಲಕನ ಶವವನ್ನು ಛಾತಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ದೇಬಾಯಿಯ ಸರ್ಕಲ್ ಅಧಿಕಾರಿ ವಂದನಾ ಶರ್ಮಾ ರವಿವಾರ ತಿಳಿಸಿದ್ದಾರೆ. .
ಶುಕ್ರವಾರ ಸಂಜೆ ತನ್ನ ಮಗ ನಾಪತ್ತೆಯಾದ ನಂತರ ಮಗುವಿನ ತಂದೆ ಪೊಲೀಸರಿಗೆ ವಿಷಯ ತಿಳಿಸಿದ್ದು, ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಅವರು ಹೇಳಿದರು.
ಪ್ರಾಥಮಿಕ ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯದ ಮೇಲೆ ಪೊಲೀಸರು ವೈದ್ಯರ ಬಳಿ ಕೆಲಸ ಮಾಡುತ್ತಿದ್ದ ಇಬ್ಬರು ಮಾಜಿ ಕೆಲಸಗಾರರನ್ನು ವಶಕ್ಕೆ ತೆಗೆದುಕೊಂಡರು ಹಾಗೂ ಬಾಲಕನ ಅಪಹರಣದಲ್ಲಿ ಅವರ ಪಾತ್ರಗಳ ಬಗ್ಗೆ ಪ್ರಶ್ನಿಸಿದರು ಎಂದು ಅವರು ಹೇಳಿದರು.
ಈ ಹಿಂದೆ ವೈದ್ಯರ ಬಳಿ ಕಾಂಪೌಂಡರ್‌ಗಳಾಗಿ ಕೆಲಸ ಮಾಡುತ್ತಿದ್ದ ಇಬ್ಬರು ತಮ್ಮ ಕೆಲಸದಲ್ಲಿ ತಪ್ಪಾಗಿ ಎರಡು ವರ್ಷಗಳ ಹಿಂದೆ ಕೆಲಸದಿಂದ ವಜಾಗೊಳಿಸಿದ್ದರಿಂದ ವೈದ್ಯನ ಮೇಲಿನ ದ್ವೇಷದಿಂದ ಪುತ್ರನನ್ನು ಅಪಹರಿಸಿ ಹತ್ಯೆಗೈದಿರುವುದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ ಎಂದು ಶರ್ಮಾ ಹೇಳಿದರು.