×
Ad

ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ವರ್ಣಬೇಧ ನೀತಿ ಹೇರುತ್ತಿದೆ: ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್

Update: 2022-02-01 21:26 IST

ಲಂಡನ್ , ಫೆ. 1: ಪ್ಯಾಲೆಸ್ತೀನಿಯರ ವಿರುದ್ಧ ಇಸ್ರೇಲ್ ವರ್ಣಬೇಧದ ಅಪರಾಧವನ್ನು ನಡೆಸುತ್ತಿದೆ ಅಲ್ಲದೆ, ಅವರನ್ನು ಕೆಳದರ್ಜೆಯ ಜನಾಂಗಿಯ ಗುಂಪು ಎಂದು ನಡೆಸಿಕೊಳ್ಳುತ್ತಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ತನ್ನ ವರದಿಯಲ್ಲಿ ಹೇಳಿದೆ. ‌

ಆ್ಯಮ್ನೆಸ್ಟಿ ಇಂಟರ್ ನ್ಯಾಷನಲ್ ಮಂಗಳವಾರ ಬಿಡುಗಡೆ ಮಾಡಿದ 280 ಪುಟಗಳ ವರದಿಯಲ್ಲಿ ಇಸ್ರೇಲ್ ಆಡಳಿತ ಹೇಗೆ ಪ್ಯಾಲೆಸ್ತೀನಿಯರ ವಿರುದ್ಧ ದಬ್ಬಾಳಿಕೆ ನಡೆಸುತ್ತಿದೆ ಹಾಗೂ ಅವರ ಮೇಲೆ ಪ್ರಾಬಲ್ಯ ಹೊಂದಿದೆ ಎಂಬ ವಿವರಗಳನ್ನು ನೀಡಿದೆ.

ಪ್ಯಾಲೆಸ್ತೀನಿಯರ ಭೂಮಿ ಹಾಗೂ ಸೊತ್ತನ್ನು ವ್ಯಾಪಕವಾಗಿ ವಶಪಡಿಸಿಕೊಳ್ಳುವುದು, ಕಾನೂನುಬಾಹಿರ ಹತ್ಯೆಗಳು, ಬಲವಂತದ ವರ್ಗಾವಣೆ, ಚಲನೆಗೆ ನಿರ್ಬಂಧ, ಆಡಳಿತಾತ್ಮಕ ಬಂಧನ ಹಾಗೂ ಪ್ಯಾಲೆಸ್ತೀನಿಯರಿಗೆ ರಾಷ್ಟ್ರೀಯತೆ ಹಾಗೂ ಪೌರತ್ವದ ನಿರಾಕರಣೆ ಸೇರಿದಂತೆ ಇಸ್ರೇಲ್ ಆಡಳಿತ ನಡೆಸುತ್ತಿರುವ ಹಲವು ರೀತಿಯ ದಮನದ ಕಳವಳಕಾರಿ ಪಟ್ಟಿಯನ್ನು ಅದು ನೀಡಿದೆ. ಈ ಅಂಶಗಳು ವರ್ಣಬೇಧಕ್ಕೆ ಸಮಾನವೆಂದು ಅದು ಬಣ್ಣಿಸಿದೆ. 

ಅಲ್ಲದೆ, ಇದು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಅದು ಕಂಡು ಕೊಂಡಿದೆ. ಈ ವರದಿಯನ್ನು ನಿರಾಕರಿಸಿರುವ ಇಸ್ರೇಲ್ ನ ವಿದೇಶಾಂಗ ವ್ಯವಹಾರಗಳ ಸಚಿವ ಯಾಯಿರ್ ಲಾಪಿಡ್, ಈ ವರದಿ ವಾಸ್ತವಕ್ಕಿಂತ ಭಿನ್ನವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಅಮ್ನೆಸ್ಟಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಹಂಚಿಕೊಂಡ ಅದೇ ಸುಳ್ಳುಗಳನ್ನು ಈ ವರದಿ ಪ್ರತಿಧ್ವನಿಸುತ್ತದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News