ಅತ್ಯಾಚಾರ ಎಸಗಿ ಬಾಲಕಿಯ ಹತ್ಯೆ, ಪೊಲೀಸರಿಂದ ತರಾತುರಿಯ ಅಂತ್ಯಸಂಸ್ಕಾರ: ಆರೋಪ

Update: 2022-02-02 01:55 GMT

ಮೀರಠ್: ಉತ್ತರ ಪ್ರದೇಶದ ಬುಲಂದರ್‌ ಶಹರ್‌ನಲ್ಲಿ ಹದಿನಾರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದ್ದು, ಮೃತ ಬಾಲಕಿಯ ಅಂತ್ಯಸಂಸ್ಕಾರವನ್ನು ಪೊಲೀಸರು ತರಾತುರಿಯಲ್ಲಿ ನಡೆಸಿದ್ದಾರೆ, ಮೃತ ಬಾಲಕಿಯ ಅಂತಿಮ ದರ್ಶನಕ್ಕೂ ಅವಕಾಶ ನೀಡಿಲ್ಲ ಎಂದು ಕುಟುಂಬದವರು ಆಪಾದಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಭಾರಿ ಪ್ರತಿಭಟನೆ ನಡೆಯಿತು. 19 ವರ್ಷದ ದಲಿತ ಯುವತಿಗೆ ಹಿಂಸೆ ನೀಡಿ ಹತ್ಯೆ ಮಾಡಿ, ಕುಟುಂಬದ ಪ್ರತಿರೋಧದ ನಡುವೆಯೂ ಪೊಲೀಸರು ತರಾತುರಿಯಲ್ಲಿ ಸಂತ್ರಸ್ತೆಯ ಅಂತಿಮ ಸಂಸ್ಕಾರ ನಡೆಸಿದ 2020ರ ಹತ್ರಾಸ್ ಘಟನೆಯನ್ನು ಇದು ಮತ್ತೆ ನೆನಪಿಸಿದೆ.

"ಇನ್ನೂ ಆಘಾತಕಾರಿ ಅಂಶವೆಂದರೆ ಈ ಘಟನೆ ಜನವರಿ 21ರಂದು ನಡೆದಿದೆ. ಆದರೆ ಪೊಲೀಸರು ಬೆದರಿಕೆ ಹಾಕಿ, ಕುಟುಂಬದವರ ಬಾಯಿ ಮುಚ್ಚಿಸಿದ್ದಾರೆ. ಆದರೆ ಬಾಯಿಯಿಂದ ಬಾಯಿಗೆ ಸುದ್ದಿ ಹರಡಿ ರಾಜಕಾರಣಿಗಳು ಘಟನೆ ಬಗ್ಗೆ ಟ್ವೀಟ್ ಮಾಡಿದ ಬಳಿಕವಷ್ಟೇ ಇದು ಬಹಿರಂಗವಾಗಿದೆ" ಎಂದು ಗ್ರಾಮಸ್ಥರೊಬ್ಬರು ವಿವರಿಸಿದ್ದಾರೆ.

ಪ್ರಕರಣದ ಬಗ್ಗೆ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಮತ್ತು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರೂ ಟ್ವೀಟ್ ಮಾಡಿದ್ದಾರೆ.

"ರಾತ್ರೋರಾತ್ರಿ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನೂ ನೆರವೇರಿಸಲು ಅವಕಾಶ ನೀಡದೇ ಪೊಲೀಸರು ಬಲವಂತವಾಗಿ ತರಾತುರಿಯಲ್ಲಿ ಅಂತ್ಯಸಂಸ್ಕಾರ ನಡೆಸುವಂತೆ ಸೂಚಿಸಿದರು" ಎಂದು ಸಂತ್ರಸ್ತ ಬಾಲಕಿಯ ತಂದೆ ದೂರಿದ್ದಾರೆ. ಐಪಿಸಿ ಮತ್ತು ಪೋಕ್ಸೊ ಕಾಯ್ದೆ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ. ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ.

ಬಾಲಕಿಗೆ ಮೇಲ್ವರ್ಗದ ಯುವಕನ ಜತೆ ಸ್ನೇಹ ಸಂಬಂಧ ಇತ್ತು ಎಂದು ಹಿಂದುಳಿದ ವರ್ಗಕ್ಕೆ ಸೇರಿದ ಬಾಲಕಿಯ ತಂದೆ ವಿವರಿಸಿದ್ದಾರೆ. ಯುವಕ ಗ್ರಾಮಕ್ಕೆ ಬಂದು ಹೊರಗೆ ಸುತ್ತಾಡಿಕೊಂಡು ಬರಲು ಕರೆದಿದ್ದಾನೆ. ಇದಕ್ಕೆ ಒಪ್ಪಿ ಬೈಕಿನಲ್ಲಿ ಬಾಲಕಿ ತೆರಳಿದ್ದಾಳೆ. ಆ ಬಳಿಕ ಮಗಳ ಶವ ಗ್ರಾಮದ ಹೊರವಲಯದ ಕೊಳವೆಬಾವಿ ಬಳಿ ಬಿದ್ದಿರುವುದಾಗಿ ಪೊಲೀಸರು ಮಾಹಿತಿ ನೀಡಿದರು. ನಾನು ಸ್ಥಳಕ್ಕೆ ಧಾವಿಸಿದಾಗ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲಾಗಿತ್ತು. 24 ಗಂಟೆ ಬಳಿಕ ನಮಗೆ ದೇಹ ಹಸ್ತಾಂತರಿಸಿ ತಕ್ಷಣ ಅಂತ್ಯಸಂಸ್ಕಾರಕ್ಕೆ ಸೂಚಿಸಲಾಯಿತು ಎಂದು ಅವರು ವಿವರಿಸಿದ್ದಾರೆ.

ಆದರೆ ಬಾಲಕಿಯ ಅಂತ್ಯಸಂಸ್ಕಾರಕ್ಕೆ ಪೊಲೀಸರು ಒತ್ತಡ ತಂದಿಲ್ಲ. ಇಡೀ ಪ್ರಕರಣವನ್ನು ರಾಜಕೀಯಗೊಳಿಸಲಾಗಿದೆ ಎಂದು ಬಲೂಂದರ್‌ ಶಹರ್ ಎಸ್‌ಎಸ್‌ಪಿ ಸಂತೋಷ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News