×
Ad

ಅಲ್ತಾಫ್‌ ಕಸ್ಟಡಿ ಸಾವು ಪ್ರಕರಣ: ಉತ್ತರಪ್ರದೇಶ ಪೊಲೀಸರಿಗೆ ಎಚ್ಚರಿಕೆ ನೀಡಿದ ಅಲಹಾಬಾದ್‌ ಹೈಕೋರ್ಟ್‌

Update: 2022-02-02 20:59 IST

ಲಕ್ನೋ, ಫೆ. 2: ಕಸ್ಗಂಜ್ ಕಸ್ಟಡಿ ಸಾವು ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವಂತೆ ಹಾಗೂ 1 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಗೆ ಸಂಬಂಧಿಸಿ ಅಫಿಡಾವಿಟ್ ಸಲ್ಲಿಸುವಂತೆ ಅಲಹಬಾದ್ ಉಚ್ಚ ನ್ಯಾಯಾಲಯ ಉತ್ತರಪ್ರದೇಶ ಪೊಲೀಸರಿಗೆ ಬುಧವಾರ ಎಚ್ಚರಿಕೆ ನೀಡಿದೆ. 

ಹಿಂದೂ ಮಹಿಳೆಯೋರ್ವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ನವೆಂಬರ್ ನಲ್ಲಿ 22 ವರ್ಷದ ಮುಸ್ಲಿಂ ಯುವಕ ಅಲ್ತಾಫ್ ನನ್ನು ಪೊಲೀಸರು ಕರೆದೊಯ್ದಿದ್ದರು. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 ಹಾಗೂ 366ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅನಂತರ ಆತ ಕಸ್ಗಂಜ್ ಪೊಲೀಸ್ ಠಾಣೆಯ ಒಳಗೆ ಶವವಾಗಿ ಪತ್ತೆಯಾಗಿದ್ದ. 

ಶೌಚಾಲಯದಲ್ಲಿ ನೆಲದಿಂದ ಎರಡು ಅಡಿ ಮೇಲೆ ಇರುವ ನಳ್ಳಿಗೆ ತನ್ನ ಜಾಕೆಟ್ನ  ಹಗ್ಗ ಬಳಸಿ ಅಲ್ತಾಫ್ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ಪ್ರತಿಪಾದಿಸಿದ್ದರು. ಆದರೆ, ಅಲ್ತಾಫ್ ನನ್ನು ಹತ್ಯೆಗೈಯಲಾಗಿದೆ ಎಂದು ಅವರು ಕುಟುಂಬ ಆರೋಪಿಸಿತ್ತು. 

ಬುಧವಾರ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಂಜನಿ ಕುಮಾರ್ ಮಿಶ್ರಾ ಹಾಗೂ ದೀಪಕ್ ವರ್ಮಾ ಅವರನ್ನು ಒಳಗೊಂಡ ಪೀಠ, ಗುರುವಾರದ ಒಳಗೆ ಅಫಿಡಾವಿಟ್ ಸಲ್ಲಿಸದೇ ಇದ್ದರೆ ಉಚ್ಚ ನ್ಯಾಯಾಲಯ ಭಾರೀ ದಂಡ ವಿಧಿಸಲಿದೆ ಎಂದು ಕಸ್ಗಂಜ್ ಪೊಲೀಸ್ ಅಧೀಕ್ಷಕ ಬೊಟ್ರೆ ರೋಹನ್ ಪ್ರಮೋದ್ ಗೆ ಎಚ್ಚರಿಸಿತ್ತು. ಅಲ್ತಾಫ್ ನ ತಂದೆ ಚಾಂದ್ ಮಿಯಾನ್ ಅವರು ಈ ಮನವಿ ಸಲ್ಲಿಸಿದ್ದರು. ಡಿಸೆಂಬರ್ 23ರಂದು ನ್ಯಾಯಾಲಯ 10 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. 

ಅಪಹರಣಕ್ಕೊಳಗಾದ ಬಾಲಕಿ ಪತ್ತೆಯಾದ ಬಳಿಕ ಅಲ್ತಾಫ್ ನ ವಿರುದ್ಧದ ಅಪಹರಣ ಪ್ರಕರಣವನ್ನು ಪೊಲೀಸರು ಕೈಬಿಟ್ಟಿದ್ದರು.ಯುವತಿಯ ತಂದೆ ದೂರಿನಲ್ಲಿ ಆರೋಪಿಸಿದಂತೆ ಆಕೆ ಅಪ್ರಾಪ್ತೆ ಅಲ್ಲ ಎಂದು ಪೊಲೀಸರು ಹೇಳಿದ್ದರು. ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ ಹೇಳಿಕೆಯಲ್ಲಿ 19 ವರ್ಷದ ಯುವತಿ, ಅಲ್ತಾಫ್ ತನ್ನನ್ನು ವಿವಾಹವಾಗುವುದಾಗಿ ಭರವಸೆ ನೀಡಿದ್ದ ಹಾಗೂ ಆಗ್ರಾಕ್ಕೆ ತೆರಳುವಂತೆ ವಿನಂತಿಸಿದ್ದ ಎಂದು ತಿಳಿಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News