ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಗರಿಷ್ಠ ರೂ. 1213 ಕೋಟಿ ಮೌಲ್ಯದ ಇಲೆಕ್ಟೋರಲ್ ಬಾಂಡ್‍ಗಳ ಮಾರಾಟ: ವರದಿ

Update: 2022-02-03 14:33 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ. 1,213 ಕೋಟಿ ಮೌಲ್ಯದ ಇಲೆಕ್ಟೋರಲ್ ಬಾಂಡ್‍ಗಳನ್ನು ಜನವರಿಯಲ್ಲಿ ಮಾರಾಟ ಮಾಡಿದ್ದು ಅವುಗಳ ಪೈಕಿ ರೂ. 784.84 ಕೋಟಿ ಮೌಲ್ಯದ ಬಾಂಡ್‍ಗಳನ್ನು ಬ್ಯಾಂಕಿನ ಹೊಸದಿಲ್ಲಿ ಶಾಖೆಯಲ್ಲಿ ನಗದೀಕರಿಸಲಾಗಿದೆ ಎಂದು thehindu.com ವರದಿ ಮಾಡಿದೆ.

ಸಾಮಾಜಿಕ ಹೋರಾಟಗಾರ ಕನ್ಹಯ್ಯಾ ಕುಮಾರ್ ಅವರು ಸಲ್ಲಿಸಿದ್ದ ಆರ್ ಟಿ ಐ ಅರ್ಜಿಗೆ ಉತ್ತರವಾಗಿ ಈ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ನೀಡಿದೆ.

ಸ್ಟೇಟ್ ಬ್ಯಾಂಕಿನ ಮುಂಬೈ ಶಾಖೆ ಗರಿಷ್ಠ, ರೂ. 489.6 ಕೋಟಿ ಮೌಲ್ಯದ ಬಾಂಡ್‍ಗಳನ್ನು ಮಾರಾಟ ಮಾಡಿದ್ದರೆ ಹೊಸದಿಲ್ಲಿ ಶಾಖೆ ರೂ. 117.12 ಕೋಟಿ ಮೌಲ್ಯದ ಬಾಂಡ್‍ಗಳನ್ನು ಮಾರಾಟ ಮಾಡಿದೆ. ಬ್ಯಾಂಕ್‍ನ ಚೆನ್ನೈ, ಕೊಲ್ಕತ್ತಾ ಮತ್ತು ಹೈದರಾಬಾದ್ ಶಾಖೆಗಳು ಕ್ರಮವಾಗಿ ರೂ. 227 ಕೋಟಿ, ರೂ. 154 ಕೋಟಿ ಮತ್ತು ರೂ. 126 ಕೋಟಿ ಮೌಲ್ಯದ ಬಾಂಡ್‍ಗಳನ್ನು ಮಾರಾಟ ಮಾಡಿವೆ.

2018ರಲ್ಲಿ ಈ ಇಲೆಕ್ಟೋರಲ್ ಬಾಂಡ್ ಯೋಜನೆ ಜಾರಿಯಾದಂದಿನಿಂದ ವಿಧಾನಸಭಾ ಚುನಾವಣೆಯೊಂದರ ಮುಂಚಿತವಾಗಿ ಈ ಬಾರಿ ಗರಿಷ್ಠ ಮೌಲ್ಯದ ಬಾಂಡ್‍ಗಳು ಮಾರಾಟವಾಗಿವೆ. ಈ ಬಾಂಡ್‍ಗಳನ್ನು ಜನವರಿ 1 ಹಾಗೂ 10ರ ನಡುವೆ ಮಾರಾಟ ಮಾಡಲಾಗಿತ್ತು ಎಂದು ವರದಿಯಾಗಿದೆ.

ಎಪ್ರಿಲ್ 2021ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ರೂ. 691 ಕೋಟಿ ಮೌಲ್ಯದ ಬಾಂಡ್‍ಗಳು ಮಾರಾಟವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News