ಪಂಜಾಬ್ ಚುನಾವಣೆ: ವರಿಷ್ಠರು ದುರ್ಬಲ ಮುಖ್ಯಮಂತ್ರಿಯನ್ನು ಬಯಸಿದ್ದಾರೆ ಎಂದ ನವಜೋತ ಸಿಂಗ್ ಸಿಧು

Update: 2022-02-05 18:11 GMT

ಚಂಡಿಗಡ,ಫೆ.5: ಕಾಂಗ್ರೆಸ್ ಪಕ್ಷವು ದೂರವಾಣಿ ಸಮೀಕ್ಷೆಯ ಬಳಿಕ ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಾಲಿ ಸಿಎಂ ಚರಣಜಿತ್ ಸಿಂಗ್ ಚನ್ನಿ ಅವರನ್ನೇ ಬಿಂಬಿಸಲು ಸಜ್ಜಾಗಿದೆ ಎಂಬ ಸುಳಿವುಗಳ ನಡುವೆಯೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು,ವರಿಷ್ಠರು ತಮ್ಮ ತಾಳಕ್ಕೆ ಕುಣಿಯುವ ಮುಖ್ಯಮಂತ್ರಿಯನ್ನು ಬಯಸಿದ್ದಾರೆ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ.

ವೈಷ್ಣೋದೇವಿ ಮಂದಿರದಿಂದ ಮರಳಿದ ಬಳಿಕ ಅಮೃತಸರದಲ್ಲಿ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಂದರ್ಭ ಸಿಧು ಈ ಬಾಂಬ್ ಸಿಡಿಸಿದ್ದಾರೆ. ಸಿಧು ಹೇಳಿಕೆಯು ಕಾಂಗ್ರೆಸ್ ಹೈಕಮಾಂಡ್ ಅನ್ನು ಗುರಿಯಾಗಿಸಿಕೊಂಡಿತ್ತು ಎಂಬ ವ್ಯಾಪಕ ಗ್ರಹಿಕೆಯಿದ್ದರೂ,ಅವರ ಮಾಧ್ಯಮ ಸಲಹೆಗಾರರು ಅದನ್ನು ನಿರಾಕರಿಸಿದ್ದಾರೆ.

ಸಭೆಯಲ್ಲಿ ‘ನಮ್ಮ ಸಿಎಂ ಹೇಗಿರಬೇಕು,ನವಜೋತ ಸಿಧುರಂತೆ ಇರಬೇಕು ’ಎಂಬ ಬೆಂಬಲಿಗರ ಘೋಷಣೆಗಳ ನಡುವೆ ಸಿಧು,ವರಿಷ್ಠರಿಗೆ ದುರ್ಬಲ ಮುಖ್ಯಮಂತ್ರಿ ಬೇಕು,ತಮ್ಮ ತಾಳಕ್ಕೆ ಕುಣಿಯುವ ಮುಖ್ಯಮಂತ್ರಿಯನ್ನು ಅವರು ಬಯಸಿದ್ದಾರೆ. ನಾಚ್ ಮೇರಿ ಬುಲ್ಬುಲ್,ತುಝೆ ಪೈಸಾ ಮಿಲೇಗಾ ’ ಎಂದು ಹೇಳಿದರು.

  ಸಿಧು ಹೇಳಿಕೆಯನ್ನು ಅನಗತ್ಯವಾಗಿ ತಿರುಚಲಾಗುತ್ತಿದೆ ಮತ್ತು ವಾಸ್ತವದಲ್ಲಿ ‘ಅವರು’ಪಂಜಾಬಿನಲ್ಲಿ ದುರ್ಬಲ ಮುಖ್ಯಮಂತ್ರಿಯನ್ನು ಬಯಸಿದ್ದಾರೆ ಎಂದು ಹೇಳಿದಾಗ ಸಿಧು ಕೇಂದ್ರ ಸರಕಾರವನ್ನು ಪ್ರಸ್ತಾಪಿಸಿದ್ದರು ಎಂದು ಮಾಧ್ಯಮ ಸಲಹೆಗಾರ ಸುರಿಂದರ್ ದಲ್ಲಾ ಸಮಜಾಯಿಷಿ ನೀಡಿದರು.

ಈ ನಡುವೆ ರವಿವಾರ ಲೂಧಿಯಾನಾದಲ್ಲಿ ನಡೆಯುವ ವರ್ಚುವಲ್ ರ್ಯಾಲಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಪಂಜಾಬ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯನ್ನು ಪ್ರಕಟಿಸಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಹರೀಶ ಚೌಧರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News