ಧರ್ಮಸಂಸತ್ ಕಾರ್ಯಕ್ರಮದಲ್ಲಿ ನೀಡಲಾದ ವಿವಾದಾತ್ಮಕ ಹೇಳಿಕೆಗಳು ಹಿಂದುತ್ವ ಅಲ್ಲ: ಮೋಹನ್ ಭಾಗ್ವತ್

Update: 2022-02-07 01:51 GMT
ಮೋಹನ್ ಭಾಗ್ವತ್ (ಫೋಟೊ - PTI)

ನಾಗ್ಪುರ: ಇತ್ತೀಚೆಗೆ ನಡೆದ ಧರ್ಮಸಂಸತ್ ಕಾರ್ಯಕ್ರಮದಲ್ಲಿ ನೀಡಲಾದ ವಿವಾದಾತ್ಮಕ ಹೇಳಿಕೆಗಳು "ಹಿಂದೂ ಶಬ್ದಗಳಲ್ಲ" ಮತ್ತು ಹಿಂದುತ್ವ ಅನುಯಾಯಿಗಳು ಅವರ ಮಾತನ್ನು ಒಪ್ಪುವುದಿಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿಕೆ ನೀಡಿದ್ದಾರೆ.

ಲೋಕಮತ್ ಮಾಧ್ಯಮ ಸಮೂಹ, ಲೋಕಮತ ನಾಗ್ಪುರ ಆವೃತ್ತಿಯ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ "ಹಿಂದುತ್ವ ಮತ್ತು ರಾಷ್ಟ್ರೀಯ ಸಮಗ್ರತೆ" ಉಪನ್ಯಾಸ ಸರಣಿಯಲ್ಲಿ ಅವರು ಮಾತನಾಡಿದರು.

"ಧರ್ಮಸಂಸತ್‌ನಲ್ಲಿ ನೀಡಲಾದ ಹೇಳಿಕೆಗಳು ಹಿಂದೂ ಶಬ್ದ, ಕೃತಿ ಅಥವಾ ಹೃದಯ ಅಲ್ಲ. ಕೆಲವೊಮ್ಮೆ ನಾನು ಕೋಪದಲ್ಲಿ ಏನಾದರೂ ಹೇಳಿದರೆ ಅದು ಹಿಂದುತ್ವ ಆಗುವುದಿಲ್ಲ. ಆರೆಸ್ಸೆಸ್ ಅಥವಾ ಹಿಂದುತ್ವ ಅನುಯಾಯಿಗಳು ಇದನ್ನು ನಂಬುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ನಡೆದ ಧರ್ಮಸಂಸತ್‌ನಲ್ಲಿ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್, ಮಹಾತ್ಮಗಾಂಧಿ ವಿರುದ್ಧ ಅವಮಾನಕಾರಿ ಹೇಳಿಕೆಯನ್ನು ನೀಡಿ ನಾಥೂರಾಂ ಗೋಡ್ಸೆಯನ್ನು ಸಮರ್ಥಿಸಿದ್ದರು. ಹರಿದ್ವಾರದಲ್ಲಿ ಡಿಸೆಂಬರ್‌ನಲ್ಲಿ ನಡೆದ ಮತ್ತೊಂದು ಧರ್ಮಸಂಸತ್ತಿನಲ್ಲಿ ಮುಸ್ಲಿಮರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಲಾಗಿತ್ತು.

ಹಿಂದೂ ಸಮುದಾಯ ಒಗ್ಗಟ್ಟಾಗಬೇಕು ಮತ್ತು ಸಂಘಟಿತವಾಗಬೇಕು ಎಂದು ವೀರ್ ಸಾವರ್‌ಕರ್ ಹೇಳಿದರೂ, ಅದು ಭಗವದ್ಗೀತೆ ಬಗ್ಗೆ ಮಾತನಾಡುತ್ತದೆಯೇ ವಿನಃ ಬೇರೆಯವರನ್ನು ಮುಗಿಸುವ ಬಗ್ಗೆ ಅಥವಾ ಬೇರೆಯವರಿಗೆ ಹಾನಿಮಾಡುವ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಭಾರತ ಹಿಂದೂರಾಷ್ಟ್ರವಾಗುವ ಹಾದಿಯಲ್ಲಿ ಸಾಗಿದೆಯೇ ಎಂಬ ಬಗ್ಗೆ ಮಾತನಾಡಿದ ಅವರು, ಅದು ಹಿಂದೂ ರಾಷ್ಟ್ರದ ಸೃಷ್ಟಿ ಅಲ್ಲ. ನೀವು ಒಪ್ಪಿಕೊಂಡರೂ ಒಪ್ಪಿಕೊಳ್ಳದಿದ್ದರೂ, ಅದು ಹಿಂದೂ ರಾಷ್ಟ್ರವೇ ಆಗಿದೆ ಎಂದು ಸಮರ್ಥಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News