×
Ad

ಅನ್ಯಾಯ ಎಲ್ಲಿರುತ್ತದೋ ಅಲ್ಲಿ ʼಜೈ ಭೀಮ್‌ʼ ಮೊಳಗುತ್ತದೆ: ಹಿಜಾಬ್‌ ಬೆಂಬಲಕ್ಕೆ ನಿಂತ ವಿದ್ಯಾರ್ಥಿಗಳಿಗೆ ವ್ಯಾಪಕ ಬೆಂಬಲ

Update: 2022-02-07 23:23 IST
screenshot from twitter

ಚಿಕ್ಕಮಗಳೂರು: ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ನಡೆಯುತ್ತಿರುವ ಹಿಜಾಬ್‌ ವಿವಾದ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದೆ. ಈ ಬಾರಿ ಉಡುಪಿ ಕಾಲೇಜಿನಲ್ಲಿ ಆರಂಭವಾದ ವಿವಾದ  ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಮಂಡ್ಯ, ವಿಜಯಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಹರಡಿದೆ.

ತಮ್ಮ ಮುಸ್ಲಿಂ ಸಹಪಾಠಿಗಳು ಹಿಜಾಬ್‌ ಧರಿಸಕೂಡದೆಂದು ಅಖಾಡಕ್ಕಿಳಿದಿರುವ ಹಿಂದುತ್ವವಾದಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ, ಜೈ ಶ್ರೀರಾಂ ಘೋಷಿಸುತ್ತಾ ಪ್ರತಿಭಟನೆ ನಡೆಸಿದ್ದಾರೆ. 25 ಶೇಕಡಾ ಇರುವ ʼಅವರಿಗೇʼ ಅಷ್ಟಿರಬೇಕಾದರೆ, 75 ಶೇಕಡಾ ಇರುವ ʼನಮಗೆʼ ಇನ್ನೆಷ್ಟಿರಬೇಡ ಎಂದು ಕೇಸರಿಧಾರಿ ವಿದ್ಯಾರ್ಥಿನಿಯೊಬ್ಬಳು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ ಭವಿಷ್ಯದ ತಲೆಮಾರಿನ ಕುರಿತು ಪ್ರಜ್ಞಾವಂತ ನಾಗರಿಕರಿಗೆ ಆತಂಕ ಮೂಡುವಂತೆ ಮಾಡಿದೆ ಎಂದು ಸಾಮಾಜಿಕ ತಾಣದಾದ್ಯಂತ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಚಿಕ್ಕಮಗಳೂರು: ಐಡಿಎಸ್ ಜಿ ಕಾಲೇಜು ಆವರಣದಲ್ಲಿ ಜೈಭೀಮ್ v/s ಜೈ ಶ್ರೀರಾಮ್ ಘೋಷಣೆ  

ಆದರೆ, ಇದೀಗ ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್‌ ಹಕ್ಕಿನ ಪರವಾಗಿ ಅಂಬೇಡ್ಕರ್‌ ವಾದಿ ವಿದ್ಯಾರ್ಥಿಗಳು ಕಣಕ್ಕಿಳಿದಿದ್ದು, ಕೇಸರಿಗೆ ಪ್ರತಿಯಾಗಿ ನೀಲಿ ಶಾಲು ಧರಿಸಿ ಕಾಲೇಜುಗಳಿಗೆ ಬಂದ ವೀಡಿಯೊಗಳು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಐಡಿಎಸ್ ಜಿ ಕಾಲೇಜಿನ ಅಂಬೇಡ್ಕರ್‌ ವಾದಿ ವಿದ್ಯಾರ್ಥಿಗಳು ‘ಜೈ ಭೀಮ್ʼ ಘೋಷಣೆ ಕೂಗುತ್ತಾ ಮುಸ್ಲಿಂ ವಿದ್ಯಾರ್ಥಿನಿಯರ ಪರವಾಗಿ ಬೆಂಬಲ ಸೂಚಿಸಿದ್ದಾರೆ.  ವಿದ್ಯಾರ್ಥಿನಿಯರ ಪರವಹಿಸಿದ ನೀಲಿ ಶಾಲಿನ ವಿದ್ಯಾರ್ಥಿಗಳು ಮತ್ತು ಹಿಜಾಬ್‌ ವಿರೋಧಿ ಕೇಸರಿ ಶಾಲಿನ ವಿದ್ಯಾರ್ಥಿಗಳ ಪರಸ್ಪರ ಮುಖಾಮುಖಿಯಾದ ವೇಳೆ ‘ಜೈ ಭೀಮ್’ ಮತ್ತು ‘ಜೈ ಶ್ರೀ ರಾಮ್’ ಘೋಷಣೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್‌ ಆಗಿದೆ.

ಅಂಬೇಡ್ಕರ್‌ ವಾದಿ ವಿದ್ಯಾರ್ಥಿಗಳ ಕ್ರಮಕ್ಕೆ ದೇಶದಾದ್ಯಂತ ಹಲವು ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇಶದ ಬಹುತ್ವ ಹಾಗೂ ಸಂವಿಧಾನಕ್ಕೆ ಧಕ್ಕೆ ಬರುವಾಗ ಅಂಬೇಡ್ಕರ್‌ ವಾದಿಗಳು ನಿಂತೇ ನಿಲ್ಲುತ್ತಾರೆ ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ.

ಮಾನವ ಹಕ್ಕು ಕಾರ್ಯಕರ್ತೆ ಕಾವಲ್‌ ಪ್ರೀತ್‌ ಕೌರ್‌, ಈ ವಿಡಿಯೋ ಹಂಚಿಕೊಂಡಿದ್ದು, “ಕರ್ನಾಟಕದಲ್ಲಿ ತಮ್ಮ ಸಹಪಾಠಿಗಳಾದ ಮುಸ್ಲಿಂ ಮಹಿಳಾ ವಿದ್ಯಾರ್ಥಿಗಳ ಹಿಜಾಬ್ ಧರಿಸುವ ಹಕ್ಕಿನ ಪರವಾಗಿ ದಲಿತ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ, ಜೈ ಭೀಮ್‌ ಘೋಷಣೆ ಕೂಗಿ ತೋರಿರುವುದು ಸಹಜ ಒಗ್ಗಟ್ಟಿನ ಪ್ರದರ್ಶನವಾಗಿದೆ. ಇದು ಫ್ಯಾಸಿಸ್ಟರ ಭಯಕ್ಕೆ ಕಾರಣವಾಗಿದೆ. ಹಿಂದೂ ರಾಷ್ಟ್ರ ಇಲ್ಲ. ಏಕರೂಪತೆ ಇಲ್ಲ.” ಎಂದು ಟ್ವೀಟ್‌ ಮಾಡಿದ್ದಾರೆ.

“ಮುಸ್ಲಿಂ ವಿದ್ಯಾರ್ಥಿಗಳ ಹಿಜಾಬ್ ಹಕ್ಕುಗಳ ವಿರುದ್ಧ ಹಿಂದೂ ವಿದ್ಯಾರ್ಥಿಗಳು ಕೇಸರಿ ಸ್ಕಾರ್ಫ್‌ನೊಂದಿಗೆ ಪ್ರತಿಭಟಿಸಿದ ನಂತರ, ಅಂಬೇಡ್ಕರ್ ವಾದಿ ವಿದ್ಯಾರ್ಥಿಗಳು ಮುಸ್ಲಿಂ ಹುಡುಗಿಯರ ಸಾಂವಿಧಾನಿಕ ಹಕ್ಕುಗಳಿಗಾಗಿ ನೀಲಿ ಸ್ಕಾರ್ಫ್ ಮತ್ತು ಜೈ ಭೀಮ್ ಘೋಷಣೆಗಳೊಂದಿಗೆ ಪ್ರತಿಭಟಿಸುತ್ತಿದ್ದಾರೆ. ತುಳಿತಕ್ಕೊಳಗಾದ ಪ್ರತಿ ಸಮುದಾಯದ ಪರ ʼಜೈಭೀಮ್ʼ ಘೋಷಣೆಗಳು ಯಾವಾಗಲೂ ಎದ್ದಿವೆ” ಎಂದು ರಿತೇಶ್‌ ಜೆ ಎಂಬವರು ಟ್ವೀಟ್‌ ಮಾಡಿದ್ದಾರೆ.

CPIML ಪಾಲಿಟ್‌ ಬ್ಯೂರೋ ಸದಸ್ಯೆ ಕವಿತಾ ಕೃಷ್ಣನ್‌ ಕೂಡಾ ನೀಲಿ ಶಾಲು ಧರಿಸಿ ಮುಸ್ಲಿಂ ವಿದ್ಯಾರ್ಥಿನಿಯರ ಬೆಂಬಲಕ್ಕೆ ನಿಂತ ವಿದ್ಯಾರ್ಥಿಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ. “ತಮ್ಮ ಸಹ ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳಿಗೆ ಜೈ ಭೀಮ್. ನನಗೆ ತುಂಬಾ ಸಂತೋಷವಾಗಿದೆ” ಎಂದು ದಿ ನ್ಯೂಸ್‌ ಮಿನಿಟ್‌ ಪತ್ರಕರ್ತ ಬಾಲಾ ಟ್ವೀಟ್‌ ಮಾಡಿದ್ದಾರೆ.

ಪತ್ರಕರ್ತ ಹಾಗೂ ಹೋರಾಟಗಾರ ಅಜಯ್‌ ʼಎಲ್ಲಿ ಅನ್ಯಾಯ ಇರುತ್ತೋ, ಅಲ್ಲಿ ಜೈ ಭೀಮ್‌ ಮೊಳಗುತ್ತೆʼ ಎಂದು ಬರೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

“ಸಂಖ್ಯಾತ್ಮಕವಾಗಿ ಹೆಚ್ಚಿನ ಬಲವಿಲ್ಲ, ಕೆಲವೇ ಸಂಪನ್ಮೂಲಗಳು, ಯಾವುದೇ ಶಕ್ತಿಯುತ ಸಂಪರ್ಕಗಳಿಲ್ಲ. ಆದರೂ ಈ ವಿದ್ಯಾರ್ಥಿಗಳು ಪ್ರಬಲ ಹಿಂದುತ್ವದ ಪುಂಡರ ವಿರುದ್ಧ ನಿಲುವು ತಳೆದರು. ಈ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆ ಇದೆ. ಅಂಬೇಡ್ಕರ್ ಅವರ ವಿಚಾರಗಳು ಮತ್ತು ಮೌಲ್ಯಗಳು ಜೀವಂತವಾಗಿರುತ್ತವೆ. ಜೈ ಭೀಮ್!” ಎಂದು ಇನ್ನೊಬ್ಬ ಟ್ವಿಟರ್‌ ಖಾತೆದಾರರು ಪ್ರತಿಕ್ರಿಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News