ಕೋವಿಡ್ ಚಿಕಿತ್ಸೆ ಸೋಗಿನಲ್ಲಿ ಲೈಂಗಿಕ ದಂಧೆಗೆ ಅಪ್ರಾಪ್ತ ಬಾಲಕಿಯ ಬಳಕೆ !
ಗುಂಟೂರು: ಹದಿಮೂರು ವರ್ಷ ವಯಸ್ಸಿನ ಅಸಹಾಯಕ ಬಾಲಕಿಯನ್ನು ನಿರಂತರ ಆರು ತಿಂಗಳ ಕಾಲ ಲೈಂಗಿಕ ದಂಧೆಗೆ ಬಳಸಿಕೊಂಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಹಲವು ಮಂದಿ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬಹಿರಂಗಗೊಂಡಿದೆ.
ದಿನಕೂಲಿ ನೌಕರರಾಗಿದ್ದ ತಂದೆ ತಮ್ಮ ಮಗಳು ನರ್ಸ್ ಒಬ್ಬರ ಜತೆಗೆ ಕೋವಿಡ್-19 ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದೇ ನಂಬಿದ್ದರು. ಘಟನೆ ಬಗೆಗೆ ನಡೆಸಿದ ತನಿಖೆ ಹಲವು ಆಘಾತಕಾರಿ ಅಂಶಗಳನ್ನು ಬಹಿರಂಗಗೊಳಿಸಿದ್ದು, ಪೊಲೀಸರು ಇದುವರೆಗೆ ಈ ಸಂಬಂಧ ದಂಧೆಯ ರೂವಾರಿಗಳು, ಪಿಂಪ್ ಹಾಗೂ ಗ್ರಾಹಕರು ಸೇರಿದಂತೆ 54 ಮಂದಿಯನ್ನು ಬಂಧಿಸಿದ್ದಾರೆ.
ಕಳೆದ ವರ್ಷದ ಜೂನ್ 26ರಂದು ಬಾಲಕಿಗೆ ಕೋವಿಡ್-19 ಸೋಂಕು ಆರಂಭವಾದಾಗಿನಿಂದ ಬಾಲಕಿಗೆ ನರಕಯಾತನೆ ಆರಂಭವಾಗಿದೆ. ಬಾಲಕಿಯನ್ನು ಗುಂಟೂರಿನ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸ್ವರ್ಣಕುಮಾರಿ ಎಂಬ ಮಹಿಳೆ 8ನೇ ತರಗತಿಯ ವಿದ್ಯಾರ್ಥಿನಿಯನ್ನು ನೋಡಿ, ನರ್ಸ್‌ನ ಸೋಗಿನಲ್ಲಿ ತಂದೆಯನ್ನು ಭೇಟಿ ಮಾಡಿದಳು. ತಾಯಿ ಇಲ್ಲದ ಈ ಬಾಲಕಿಗೆ ಉತ್ತಮ ಚಿಕಿತ್ಸೆ ನೀಡುವ ಭರವಸೆ ನೀಡಿ ತಂದೆಯನ್ನು ಮನವೊಲಿಸಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದಳು. ಕೆಲ ದಿನಗಳ ಬಳಿಕ ಬಾಲಕಿಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿ, ನೆಲ್ಲೂರು, ವಿಜಯವಾಡ, ಓಂಗೋಲ್ ಮತ್ತು ಹೈದರಾಬಾದ್ ಹೀಗೆ ಹಲವೆಡೆಗೆ ಕರೆದೊಯ್ದಳು. ಹಲವು ಮಂದಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.
ಅನುಮಾನ ಬಾರದಂತೆ ಮಾಡುವ ಸಲುವಾಗಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸ್ವರ್ಣಕುಮಾರಿ, ತನ್ನ ಕಣ್ಗಾವಲಿನಲ್ಲಿ ತಂದೆಗೆ ದೂರವಾಣಿ ಮೂಲಕ ಮಾತನಾಡಲು ಅವಕಾಶ ನೀಡುತ್ತಿದ್ದು. ಕೆಲ ತಿಂಗಳ ಬಳಿಕ ಬಾಲಕಿ ಈ ವರ್ತುಲದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ.
ಬಾಲಕಿ ಮಹಿಳೆಯಿಂದ ತಪ್ಪಿಸಿಕೊಂಡು ವಿಜಯವಾಡ ತಲುಪಿದ್ದಾಳೆ. ಆಗ ಮಹಿಳೆ ಬಾಲಕಿಯ ತಂದೆಗೆ ಕರೆ ಮಾಡಿ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಮಾಹಿತಿ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಗುಂಟೂರಿನ ನಲ್ಲಪಾಡು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಆದರೂ ಬಾಲಕಿಯ ಯಾತನಾಮಯ ಬದುಕು ಮುಂದುವರಿಯಿತು.
ವಿಜಯವಾಡದಲ್ಲಿ ಮತ್ತೊಂದು ಲೈಂಗಿಕ ದಂಧೆ ಜಾಲಕ್ಕೆ ಬಾಲಕಿ ಬಲೆ ಬಿದ್ದಳು. ಬಸ್ ನಿಲ್ದಾಣದಲ್ಲಿ ಆಕೆಯನ್ನು ನೋಡಿದ ಮಹಿಳೆಯೊಬ್ಬಳು ಆಕೆಯನ್ನು ಕರೆದೊಯ್ದಿದ್ದಾಳೆ. ಈ ಅವಕಾಶ ಬಳಸಿಕೊಂಡು ಕಾಕಿನಾಡ, ತನುಕು ಹಾಗೂ ಇತರ ಹಲವು ಕಡೆಗಳಿಗೆ ಕರೆದೊಯ್ದು ಗಿರಾಕಿಗಳಿಗೆ ತಮ್ಮ ಕಾಮತೃಷೆಗೆ ಬಳಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.
ಬಾಲಕಿಯನ್ನು ಒಂದು ಮನೆಯಿಂದ ಮತ್ತೊಂದು ಮನೆಗೆ ಸ್ಥಳಾಂತರಿಸುವ ವೇಳೆ ಜೆಸಿಂತಾ ಹಾಗೂ ಆಕೆಯ ಮಗಳು ಹೇಮಲತಾ ಎಂಬುವ ಇಬ್ಬರು ಆಕೆಯನ್ನು ರಕ್ಷಿಸುವ ನೆಪದಲ್ಲಿ ಅವಕಾಶವನ್ನು ಬಳಸಿಕೊಂಡು ದಂಧೆಕೋರರಿಗೆ ಬ್ಲ್ಯಾಕ್‌ಮೇಲ್ ಮಾಡಿ ಅವರಿಂದ ಹಣವನ್ನೂ ಕಸಿದುಕೊಂಡಿದ್ದಾರೆ. ಬಾಲಕಿಯನ್ನು ಕಾಯಂ ಆಗಿ ದಂಧೆಗೆ ತಳ್ಳುವ ಉದ್ದೇಶದಿಂದ ಬಾಲಕಿಯ ಶಾಲೆಗೆ ತೆರಳಿ ಟಿಸಿ ಪಡೆಯಲು ಮುಂದಾಗಿದ್ದಾರೆ. ಶಾಲೆಯ ಆಡಳಿತ ಮಂಡಳಿಗೆ ಅನುಮಾನ ಬಂದು ಟಿಸಿ ನೀಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಒಟ್ಟು 54 ಮಂದಿಯನ್ನು ಬಂಧಿಸಿ, ಐಪಿಸಿ ಸೆಕ್ಷನ್, ಅನೈತಿಕ ಕಳ್ಳಸಾಗಾಣಿಕೆ (ತಡೆ) ಕಾಯ್ದೆ ಮತ್ತು ಪೋಕ್ಸೊ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.