ವಲಸೆ ಕಾರ್ಮಿಕರಿಗೆ ಕಾಂಗ್ರೆಸ್ ಸಹಾಯ ಮಾಡಿದ್ದಕ್ಕೆ ಮೋದಿ ಆಕ್ಷೇಪ: ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

Update: 2022-02-08 06:08 GMT

ಪಣಜಿ: ಮಹರಾಷ್ಟ್ರದಿಂದ ತಮ್ಮೂರುಗಳಿಗೆ ತೆರಳಲು ವಲಸೆ ಕಾರ್ಮಿಕರಿಗೆ ಕಾಂಗ್ರೆಸ್‌ ಉಚಿತ ಟಿಕೆಟ್‌ ನೀಡಿದ್ದರಿಂದ ಕೋವಿಡ್‌ ಉತ್ತರ ಪ್ರದೇಶ, ಉತ್ತಾರಾಖಂಡ ಹಾಗೂ ಪಂಜಾಬಿಗೆ ಹರಡಲು ಕಾರಣವಾಯಿತು ಎಂದು ಸಂಸತ್ತಿನಲ್ಲಿ ಪ್ರಧಾನಿ ಮೋದಿ ನೀಡಿರುವ ಹೇಳಿಕೆಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಡೆದು ತಮ್ಮೂರುಗಳಿಗೆ ತೆರಳುತ್ತಿದ್ದ ಬಡ ವಲಸೆ ಕಾರ್ಮಿಕರಿಗೆ ಯಾರೂ ಸಹಾಯ ಮಾಡಬಾರದೆಂದು ಪ್ರಧಾನಿ ಮೋದಿ ಬಯಸಿದ್ದರೆಯೇ? ಎಂದು ಪ್ರಿಯಾಂಕ ಪ್ರಶ್ನಿಸಿದ್ದಾರೆ.

ಪಣಜಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಿಯಾಂಕ, ʼಕಾಲ್ನಡಿಗೆಯಲ್ಲಿ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದವರಿಗೆ ಯಾರೂ ಸಹಾಯ ಮಾಡಬಾರದು ಎಂದು ಅವರು (ಪ್ರಧಾನಿ ಮೋದಿ) ಬಯಸಿದ್ದರೇ? ಮೋದಿಜಿಗೆ ಏನು ಬೇಕಿತ್ತು? ಅವರಿಗೆ ಬಡವರಿಗೆ ಯಾರೂ ಸಹಾಯ ಮಾಡಬಾರದಿತ್ತೇ?ʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಸಂಧರ್ಭದಲ್ಲಿ ಮೋದಿ ನಡೆಸಿದ ಬೃಹತ್‌ ರ್ಯಾಲಿಗಳನ್ನು ಉಲ್ಲೇಖಿಸಿದ ಪ್ರಿಯಾಂಕ, ʼಪ್ರಧಾನಿ ಮೋದಿ ತಾವು ನಡೆಸಿದ ಬೃಹತ್‌ ರ್ಯಾಲಿಗಳ ಕತೆ ಏನು?ʼ ಎಂದು ಪ್ರಶ್ನಿಸಿದ್ದಾರೆ.

ಸಂಸತ್ತಿನಲ್ಲಿ ಮಾತನಾಡುತ್ತಾ ಮೋದಿ, ಕೋವಿಡ್‌ ಹರಡಲು ಕಾಂಗ್ರೆಸ್‌ ಕಾರಣ ಎಂದು ಆರೋಪಿಸಿದ್ದರು. ʼಕೋವಿಡ್‌ ಸಂಧರ್ಭದಲ್ಲಿ ಕಾಂಗ್ರೆಸ್‌ ಮಿತಿ ಮೀರಿ ವರ್ತಿಸಿದೆ. ವಲಸೆ ಕಾರ್ಮಿಕರನ್ನು ತಮ್ಮೂರುಗಳಿಗೆ ಮರಳಲು ಸಹಾಯ ಮಾಡಿ ಕೋವಿಡ್‌ ಇತರೆ ರಾಜ್ಯಗಳಿಗೂ ಹರಡಲು ಕಾಂಗ್ರೆಸ್‌ ಕಾರಣವಾಗಿದೆʼ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News