×
Ad

ಲಾಕ್‌ಡೌನ್‌ ಧಿಕ್ಕರಿಸಿ ಊರಿಗೆ ತೆರಳಿದ ವಲಸೆ ಕಾರ್ಮಿಕರಿಂದ ಕೋವಿಡ್‌ ಹೆಚ್ಚಿತು ಎಂದ ಮೋದಿ: ಪ್ರತಿಪಕ್ಷಗಳಿಂದ ಟೀಕೆ

Update: 2022-02-08 15:00 IST

ಮುಂಬೈ: ಕೋವಿಡ್ -19 ರ ಮೊದಲ ಅಲೆಯ ಸಮಯದಲ್ಲಿ, ವಲಸೆ ಕಾರ್ಮಿಕರಿಗೆ ಮುಂಬೈಯಿಂದ ಹೊರಡಲು ಕಾಂಗ್ರೆಸ್ ಉಚಿತ ರೈಲು ಟಿಕೆಟ್‌ಗಳನ್ನು ನೀಡಿತು. ಇದರಿಂದ ಕೋವಿಡ್‌ ವ್ಯಾಪಕವಾಗಿ ಹರಡಿತು ಎಂದು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ ಕಾಂಗ್ರೆಸ್‌ ಸೋಮವಾರ ತಿರುಗೇಟು ನೀಡಿದೆ.  

ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಕಂದಾಯ ಸಚಿವ ಬಾಳಾಸಾಹೇಬ್ ಥೋರಟ್ ಮಾತನಾಡಿ, ''ಕೇಂದ್ರ ಸರಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ ಸರಕಾರ ಮಾಡಿರುವುದು ನಮಗೆ ಹೆಮ್ಮೆ ತಂದಿದೆ. ಪ್ರಧಾನಿ ಮೋದಿ ಅವರು ಬಳಸಿದ ಭಾಷೆ ಪ್ರಧಾನಿ ಹುದ್ದೆಗೆ ಸೂಕ್ತವಲ್ಲ, ರಾಜಕೀಯದಲ್ಲಿ ಇಂತಹ ಕೀಳು ಮಟ್ಟಕ್ಕೆ ಇಳಿಯಬಾರದು. ಇದು ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ.” ಎಂದು ಹೇಳಿದ್ದಾರೆ. 

ಲಾಕ್‌ಡೌನ್‌ನ ಹಠಾತ್ ಘೋಷಣೆಯಿಂದಾಗಿ  ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಮರಳಲು ಬಯಸುವ ವಲಸೆ ಕಾರ್ಮಿಕರು ಅತಂತ್ರರಾಗಿದ್ದರು. ಅವರ ವಸತಿಗಾಗಿ ಕಾಂಗ್ರೆಸ್ ಪಕ್ಷ ಮತ್ತು ಎಂವಿಎ ಸರ್ಕಾರ ವ್ಯವಸ್ಥೆ ಮಾಡಿದೆ ಎಂದು ಥೋರಟ್ ಹೇಳಿದ್ದಾರೆ. 

‘‘ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯು ಸುಮಾರು 50,000 ಕಾರ್ಮಿಕರನ್ನು ತನ್ನ ಸ್ವಂತ ಖರ್ಚಿನಲ್ಲಿ ಸುರಕ್ಷಿತವಾಗಿ ಆಯಾ ಗ್ರಾಮಗಳಿಗೆ ಕಳುಹಿಸಿದೆ. ನಂತರ, ಎಂವಿಎ ಸರ್ಕಾರವು ಕೂಡಾ ಪರಿಹಾರವನ್ನು ನೀಡಿದೆ. ಇದು ಪ್ರಪಂಚದಾದ್ಯಂತ ಪ್ರಶಂಸೆಗೆ ಒಳಗಾಯಿತು,'' ಎಂದು ಅವರು ಹೇಳಿಕೆ ನೀಡಿದ್ದಾರೆ.
 
"ಉತ್ತರ ಪ್ರದೇಶ ಮತ್ತು ಬಿಹಾರದ ಸಹೋದರರ ಮೇಲೆ ಆರೋಪ ಮಾಡುವ ಮೂಲಕ ಪ್ರಧಾನಿ ಏನು ಸಾಬೀತುಪಡಿಸಲು ಬಯಸುತ್ತಾರೆ? ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಧೋರಣೆ ತೋರಿದ್ದಾರೆ" ಎಂದು ಕಿಡಿಕಾರಿದ್ದಾರೆ.

ಈ ಅವಧಿಯಲ್ಲಿ ರೈಲ್ವೇ ಮತ್ತಿತರ ಸಾರಿಗೆ ವ್ಯವಸ್ಥೆಗಳ ಮೂಲಕ ಕಾರ್ಮಿಕರು ಹೊರಡುವ ವ್ಯವಸ್ಥೆ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ಓಡಿಹೋಗಿ ಕಾರ್ಮಿಕರನ್ನು ಸಾಯುವಂತೆ ಮಾಡಿದೆ ಎಂದು ಥೋರಟ್ ಆರೋಪಿಸಿದ್ದಾರೆ.
ಮತ್ತೊಂದೆಡೆ, ಎನ್‌ಸಿಪಿ   ಸಂಸತ್ತನ್ನು ಪ್ರಧಾನಿ ಚುನಾವಣಾ ಪ್ರಚಾರಕ್ಕಾಗಿ ಅಖಾಡವಾಗಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
 
ಪಂಜಾಬ್, ಯುಪಿ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಎನ್‌ಸಿಪಿ ಆರೋಪಿಸಿದೆ.

ಏಕಾಏಕಿ ಲಾಕ್‌ಡೌನ್ ನಿರ್ಧಾರದಿಂದಾಗಿ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ಇತರ ಹಲವು ರಾಜ್ಯಗಳಿಂದ ವಲಸೆ ಕಾರ್ಮಿಕರು ಲಭ್ಯವಿರುವ ಮಾರ್ಗಗಳೊಂದಿಗೆ ತಮ್ಮ ತಮ್ಮ ಹಳ್ಳಿಗಳಿಗೆ ತೆರಳಿದರು. ಹಲವಾರು ಮಂದಿ ಬರಿಗಾಲಲ್ಲೇ ನಡೆದು ತಮ್ಮೂರು ಸೇರಿದರು. ಆದರೆ, ಪ್ರಧಾನಿ ಮೋದಿಯವರು ಪಂಜಾಬ್, ಯುಪಿ ಮತ್ತು ಉತ್ತರಾಖಂಡ್ ಚುನಾವಣೆಗಳನ್ನು ಮತದಾರರ ಅನುಕಂಪ ಗಳಿಸಲು ಮಾತ್ರ ಪ್ರಸ್ತಾಪಿಸಿದ್ದಾರೆ,'' ಎಂದು   ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಹೇಳಿದ್ದಾರೆ.

ಲಾಕ್‌ಡೌನ್ ಹೇರಿದ ನಂತರ ಕೇಂದ್ರವು ಗುಜರಾತ್‌ನಿಂದಲೂ ಹೊರಡುವ ಶ್ರಮಿಕ್ ರೈಲುಗಳನ್ನು ಓಡಿಸಿದೆ. ಅದರಲ್ಲಿ ಹೆಚ್ಚಿನ ರೈಲುಗಳು ಗುಜರಾತ್‌ನಿಂದ ಯುಪಿಗೆ ಹೊರಟಿವೆ. ‘2020ರ ಸೆಪ್ಟೆಂಬರ್ 16ರಂದು ಸರಕಾರವು ಈ ಸಂಬಂಧ ಸಂಸತ್ತಿಗೆ ಮಾಹಿತಿ ನೀಡಿತ್ತು. ಆದಾಗ್ಯೂ, ಪಂಜಾಬ್‌ನಿಂದ ಕೆಲವೇ ಜನರು ಇತರ ರಾಜ್ಯಗಳಿಗೆ ಕಾರ್ಮಿಕರಾಗಿ ಹೋಗುವುದರಿಂದ ಪಂಜಾಬ್‌ಗೆ ಯಾವುದೇ ರೈಲುಗಳನ್ನು ಆಯೋಜಿಸಲಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಉತ್ತರದ ರಾಜ್ಯಗಳಿಂದ ಅನೇಕ ಕಾರ್ಮಿಕರು ಕೃಷಿ ಕೆಲಸಕ್ಕಾಗಿ ಪಂಜಾಬ್‌ಗೆ ಹೋಗುತ್ತಾರೆ. ಪಂಜಾಬ್, ಯುಪಿ ಮತ್ತು ಉತ್ತರಾಖಂಡದ ಚುನಾವಣೆಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಸಂಸತ್ತಿನಲ್ಲಿ ಮಹಾರಾಷ್ಟ್ರದ ಬಗ್ಗೆ ಅವಹೇಳನಕಾರಿ ಮತ್ತು ತಪ್ಪಾದ ಹೇಳಿಕೆಗಳನ್ನು ನೀಡುವುದು ಸೂಕ್ತವಲ್ಲ,’’ ಎಂದು ಅವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News