ತ್ರಿಪುರಾ: ಬಂಡುಕೋರ ಶಾಸಕರು ಕಾಂಗ್ರೆಸ್‌ಗೆ ಸೇರ್ಪಡೆ
ಗುವಾಹಟಿ,ಫೆ.8: ಹಿರಿಯ ನಾಯಕ ಸುದೀಪ್ ರಾಯ್ ಬರ್ಮನ್ ಸೇರಿದಂತೆ ತ್ರಿಪುರಾದ ಇಬ್ಬರು ಬಂಡುಕೋರ ಬಿಜೆಪಿ ಶಾಸಕರು ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಇದು ಸರಕಾರವನ್ನು ಉರುಳಿಸುವ ಸಂಚು ಎಂದು ಬಿಜೆಪಿ ಬಣ್ಣಿಸಿದೆ. ಬರ್ಮನ್ ಮತ್ತು ಆಶಿಷ್ ಕುಮಾರ್ ಸಹಾ ಅವರು ದಿಲ್ಲಿಯಲ್ಲಿ ರಾಹುಲ್ ಗಾಂಧಿಯವರ ನಿವಾಸದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ತ್ರಿಪುರಾದ ಕಾಂಗ್ರೆಸ್ ಉಸ್ತುವಾರಿ ಅಜಯ ಕುಮಾರ ಉಪಸ್ಥಿತರಿದ್ದರು. ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುವ ಮುನ್ನ ಬರ್ಮನ್ ಪ್ರಿಯಾಂಕಾರೊಂದಿಗೆ ವ್ಯಾಪಕ ಚರ್ಚೆ ನಡೆಸಿದ್ದರು.
ಬರ್ಮನ್ ಮತ್ತು ಸಹಾ ಸೋಮವಾರ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದರು. ಕಾಂಗ್ರೆಸ್ಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಬರ್ಮನ್, ಹಲವಾರು ಶಾಸಕರು ಬಿಜೆಪಿಯನ್ನು ತೊರೆಯಲು ಸಿದ್ಧರಾಗಿದ್ದಾರೆ, ಆದರೆ ಬಹುಶಃ ತಾಂತ್ರಿಕ ಕಾರಣಗಳಿಂದಾಗಿ ಕೆಲವು ತಿಂಗಳು ಕಾಯಲು ಅವರು ಬಯಸಿದ್ದಾರೆ.ಬಿಜೆಪಿಯ ಬಗ್ಗೆ ಪ್ರತಿಯೊಬ್ಬರೂ ಭ್ರಮನಿರಸನಗೊಂಡಿದ್ದಾರೆ. ಗುಜರಾತ ಮತ್ತು ಹಿಮಾಚಲ ಪ್ರದೇಶದೊಂದಿಗೆ ತ್ರಿಪುರಾದಲ್ಲಿಯೂ ಚುನಾವಣೆ ನಡೆಯುತ್ತದೆ ಎಂದು ತಾನು ಭಾವಿಸಿದ್ದೇನೆ ಎಂದರು.
‘ಇದು ಬಿಜೆಪಿ ಸರಕಾರವನ್ನು ಉರುಳಿಸಲು ಸಂಚು ಆಗಿದೆ,ಆದರೆ ಅದು ಯಶಸ್ವಿಯಾಗುವುದಿಲ್ಲ. ಈ ಸರಕಾರವನ್ನು ರಕ್ಷಿಸುವಂತೆ ತ್ರಿಪುರಾದಲ್ಲಿನ ಬಿಜೆಪಿ ಕಾರ್ಯಕರ್ತರಿಗೆ ನಾವು ಕಳಕಳಿಯ ಕರೆ ನೀಡುತ್ತಿದ್ದೇವೆ ’ಎಂದು ತ್ರಿಪುರಾ ಸರಕಾರದ ವಕ್ತಾರ ಸುಷಾಂತ ಚೌಧರಿ ಹೇಳಿದರು.
ಮುಂದಿನ ವರ್ಷ ನಡೆಯಲಿರುವ ತ್ರಿಪುರಾ ಚುನಾವಣೆಗೆ ಮುನ್ನ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಇನ್ನೂ ಕನಿಷ್ಠ ಆರು ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.