ಪಂಜಾಬ್: ಪಾಕ್ ಡ್ರೋನ್ ನತ್ತ ಬಿಎಸ್ಎಫ್ ಗುಂಡಿನ ದಾಳಿ: ಮಾದಕದ್ರವ್ಯ,ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನ ವಿಫಲ

Update: 2022-02-09 15:33 GMT

ಹೊಸದಿಲ್ಲಿ,ಫೆ.9: ಪಂಜಾಬಿನ ಭಾರತ-ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ಮೂಲಕ ಮಾದಕದ್ರವ್ಯ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯ ಪ್ರಯತ್ನವನ್ನು ವಿಫಲಗೊಳಿಸಿರುವುದಾಗಿ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯು ಬುಧವಾರ ತಿಳಿಸಿದೆ.

ಗುರುದಾಸಪುರ ವಿಭಾಗದ ಪಂಜಗ್ರೇನ್ ಪ್ರದೇಶದಲ್ಲಿ ನಸುಕಿನ ಒಂದು ಗಂಟೆಯ ಸುಮಾರಿಗೆ ಪಾಕಿಸ್ತಾನದ ಕಡೆಯಿಂದ ಭಾರತದತ್ತ ಬರುತ್ತಿದ್ದ ಶಂಕಿತ ಡ್ರೋನ್‌ನ ಶಬ್ದ ಕೇಳಿದ ಬಳಿಕ ಯೋಧರು ಅದರತ್ತ ಗುಂಡುಗಳನ್ನು ಹಾರಿಸಿದ್ದರು. ಘಗ್ಗರ್ ಮತ್ತು ಸಿಂಘೋಕೆ ಗ್ರಾಮ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಸಂದರ್ಭ ಶಂಕಿತ ಮಾದಕದ್ರವ್ಯಗಳ ಹಳದಿ ಬಣ್ಣದ ಎರಡು ಪೊಟ್ಟಣಗಳು ಪತ್ತೆಯಾಗಿದ್ದು,ಒಂದರಲ್ಲಿ ಪಿಸ್ತೂಲು ಕೂಡ ಇತ್ತು. 

ಗಡಿಬೇಲಿಯಿಂದ ಸುಮಾರು 2.7 ಕಿ.ಮೀ.ದೂರದ ಹೊಲದಿಂದ ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರೋನ್ ಇವುಗಳನ್ನು ಬೀಳಿಸಿತ್ತು ಶಂಕಿಸಲಾಗಿದೆ ಎಂದು ಬಿಎಸ್ಎಫ್ನ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು. ಡ್ರೋನ್ ಕೂಡ ಪತನಗೊಂಡಿದೆಯೇ ಅಥವಾ ಪಾರಾಗಿದೆಯೇ ಎನ್ನುವುದನ್ನು ಕಂಡುಕೊಳ್ಳಲು ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News