‘‘ವಿವಾದ ಇಲ್ಲ, ನಿಷೇಧದ ಪ್ರಸ್ತಾವ ಇಲ್ಲ’’: ಹಿಜಾಬ್ ಕುರಿತು ಮಧ್ಯಪ್ರದೇಶದ ಸಚಿವ

Update: 2022-02-09 18:20 GMT
Photo: Twitter/drnarottammisra

 ಭೋಪಾಲ, ಫೆ. 9: ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅಥವಾ ಸ್ಕಾರ್ಫ್ ಧರಿಸುವುದಕ್ಕೆ ನಿಷೇಧ ಹೇರುವ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿ ಇಲ್ಲ ಎಂದು ಮಧ್ಯಪ್ರದೇಶದ ಬಿಜೆಪಿ ಸರಕಾರ ಬುಧವಾರ ಹೇಳಿದೆ.

‘‘ಮಧ್ಯಪ್ರದೇಶದಲ್ಲಿ ಹಿಜಾಬ್ ಧರಿಸುವ ಕುರಿತು ಯಾವುದೇ ವಿವಾದ ಇಲ್ಲ. ಹಿಜಾಬ್ ನಿಷೇಧಿಸುವ ಕುರಿತ ಯಾವುದೇ ಪ್ರಸ್ತಾಪ ಸರಕಾರದ ಪರಿಶೀಲನೆಯಲ್ಲಿ ಇಲ್ಲ’’ ಎಂದು ಗೃಹ ಸಚಿವ ನರೋತ್ತಮ ಮಿಶ್ರಾ ಅವರು ಹೇಳಿದ್ದಾರೆ.

‘‘ಈ ಬಗ್ಗೆ ಯಾವುದೇ ಗೊಂದಲ ಕೂಡ ಇರಬಾರದು’’ ಎಂದು ಅವರು ಭೋಪಾಲದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತರಗತಿಯಲ್ಲಿ ಹಿಜಾಬ್ ಧರಿಸುವುದು ತಮ್ಮ ಹಕ್ಕು ಎಂದು ಪ್ರತಿಪಾದಿಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿ ಕರ್ನಾಟಕದಲ್ಲಿ ಸಂಘ ಪರಿವಾರ ನಡೆಸುತ್ತಿರುವ ಪ್ರತಿಭಟನೆಗಳ ನಡುವೆ ನರೋತ್ತಮ ಮಿಶ್ರಾ ಅವರ ಈ ಹೇಳಿಕೆ ಹೊರ ಬಿದ್ದಿದೆ.

ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಸಚಿವರು, ಇನ್ನೊಂದು ರಾಜ್ಯದ ವಿಷಯವನ್ನು ನಾನು ಚರ್ಚಿಸುವುದಿಲ್ಲ. ಅಲ್ಲದೆ, ಈ ಬಗ್ಗೆ ಕರ್ನಾಟಕ ಉಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ ಎಂದರು.

ಅವರ ಸಂಪುಟ ಸಹೋದ್ಯೋಗಿ, ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರು, ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಿಗೆ ಬೆಂಬಲ ವ್ಯಕ್ತಪಡಿಸಿದ ಹಾಗೂ ಹಿಜಾಬ್ ಅನ್ನು ನಿಷೇಧಿಸಬೇಕು ಎಂದು ಪ್ರತಿಪಾದಿಸಿದ ಒಂದು ದಿನದ ಬಳಿಕ ನರೋತ್ತಮ ಮಿಶ್ರಾ ಅವರ ಈ ಹೇಳಿಕೆ ಹೊರ ಬಿದ್ದಿದೆ.

ತನ್ನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ಪರ್ಮಾರ್ ಅವರು ಬುಧವಾರ ಪ್ರತಿಪಾದಿಸಿದ್ದಾರೆ. ‘‘ಕೆಲವರು ತನ್ನ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದಾರೆ. ಸಮವಸ್ತ್ರಕ್ಕೆ ಸಂಬಂಧಿಸಿದ ಪ್ರಸಕ್ತ ವ್ಯವಸ್ಥೆ ಶಾಲೆಗಳಲ್ಲಿ ಮುಂದುವರಿಯಲಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News