ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ; ಎಸ್ಪಿ ಅಭ್ಯರ್ಥಿಯನ್ನು ಜಿನ್ನಾಗೆ ಹೋಲಿಸಿದ ಬಿಜೆಪಿ !
ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗುವ 24 ಗಂಟೆ ಮೊದಲು ಆಡಳಿತಾರೂಢ ಬಿಜೆಪಿ, ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದು, ಪಕ್ಷದ ಕೈರಾನಾ ಅಭ್ಯರ್ಥಿ ನಹೀದ್ ಹಸನ್ ಅವರನ್ನು ಪಾಕಿಸ್ತಾನ ಸಂಸ್ಥಾಪಕ ಮೊಹ್ಮದ್ ಅಲಿ ಜಿನ್ನಾ ಅವರಿಗೆ ಹೋಲಿಸಿದೆ.
ಪಶ್ಚಿಮ ಉತ್ತರ ಪ್ರದೇಶದ 57 ಕ್ಷೇತ್ರಗಳಲ್ಲಿ ಮತದಾರರು ಮತಗಟ್ಟೆಗೆ ತೆರಳುವ ಮುನ್ನ ಇದೇ ನೆನಪು ಸುಳಿಯುವಂಥ ತಂತ್ರ ಹೂಡಿದೆ.
ಬುಧವಾರ ಬಿಜೆಪಿ ಹಸನ್ ಕುರಿತ ವಿಡಿಯೊವನ್ನು ಟ್ವೀಟ್ ಮಾಡಿದ್ದು, ಕೈರಾನಾ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಜೆಪಿ ಬೆಂಬಲಿಗರಿಂದ ಏನನ್ನೂ ಖರೀದಿಸದಂತೆ ಈ ವಿಡಿಯೊದಲ್ಲಿ ಹಸನ್ ಮನವಿ ಮಾಡುತ್ತಿದ್ದಾರೆ. "ಇವರು ಜಿನ್ನಾ ವಾದಿ ಎನ್ನುವುದನ್ನು ಇದು ತೋರಿಸುತ್ತದೆ" ಎಂಬ ಹಿನ್ನೆಲೆ ಧ್ವನಿಯೊಂದಿಗೆ ಟ್ವೀಟ್ ಮಾಡಲಾಗಿದೆ. ಈ ಮೂಲಕ 2017ರ ಚುನಾವಣೆಗೆ ಮುನ್ನ ಕೈರಾನಾದಿಂದ ಹಿಂದೂಗಳು ವಲಸೆ ಹೋಗಲು ಕಾರಣ ಎನ್ನಲಾದ ಹಸನ್ ಅವರನ್ನು ಹಿಂದೂ ವಿರೋಧಿ ಗ್ಯಾಂಗ್ ಸ್ಟರ್ ಎಂದು ಬಿಂಬಿಸಲಾಗಿದೆ.
ನಹೀದ್ ಹಸನ್ ಅವರಿಗೆ ಟಿಕೆಟ್ ನೀಡುವ ಮೂಲಕ ಅಖಿಲೇಶ್ ಅವರು ಜಿನ್ನಾ ಅವರ ನೈಜ ಅನುಯಾಯಿ ಎನ್ನುವುದನ್ನು ತೋರಿಸಿಕೊಂಡಿದ್ದಾರೆ ಎಂದು ಹಿನ್ನೆಲೆ ಧ್ವನಿಯಲ್ಲಿ ವಿವರಿಸಲಾಗಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ವಕ್ತಾರ ಅಬ್ದುಲ್ ಹಫೀಝ್ ಗಾಂಧಿ, "ಇದು ಚುನಾವಣೆಯನ್ನು ಧ್ರುವೀಕರಿಸುವ ಪ್ರಯತ್ನ. ಅಭಿವೃದ್ಧಿಯ ಕ್ಷೇತ್ರದಲ್ಲಿ ತೋರಿಸುವಂಥದ್ದು ಬಿಜೆಪಿಗೆ ಏನೂ ಇಲ್ಲ" ಎಂದು ಲೇವಡಿ ಮಾಡಿದ್ದಾರೆ.