×
Ad

ಗುಜರಾತ್ ಹಿಂಸಾಚಾರದಲ್ಲಿ ಮೃತಪಟ್ಟ ಮೂವರ ಮೃತದೇಹಗಳನ್ನು ಇಂಗ್ಲೆಂಡ್‍ಗೆ ಕಳುಹಿಸಿಕೊಡಬೇಕೆಂದು ಬ್ರಿಟಿಷ್ ಸಂಸದೆ ಆಗ್ರಹ

Update: 2022-02-10 13:43 IST
ಕಿಮ್ ಲೀಡ್‍ಬೀಟರ್(Twitter/Geeta Mohan)

ಹೊಸದಿಲ್ಲಿ: ಗುಜರಾತ್‍ನಲ್ಲಿ 2002ರಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಮೂವರ ಮೃತದೇಹಗಳನ್ನು ಇಂಗ್ಲೆಂಡ್‍ಗೆ ಕಳುಹಿಸಿಕೊಡಬೇಕೆಂದು ಬ್ರಿಟನ್‍ನ ಲೇಬರ್ ಪಕ್ಷದ ಸಂಸದೆ ಕಿಮ್ ಲೀಡ್‍ಬೀಟರ್ ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.

ವೆಸ್ಟ್‍ಮಿನಿಸ್ಟರ್ ಕಮಿಟಿ ಕೊಠಡಿಯಲ್ಲಿ ಬ್ರಿಟಿಷ್ ಸಂಸದರ ಒಂದು ಸಣ್ಣ ಗುಂಪಿನ ಜತೆಗೆ ನಡೆದ ಚರ್ಚೆಯಲ್ಲಿ ಅವರು ಮೇಲಿನ ಆಗ್ರಹವನ್ನು ಮುಂದಿಟ್ಟಿದ್ದಾರೆ. ಗುಜರಾತ್ ಹಿಂಸಾಚಾರ ನಡೆದು 20ನೇ ವರ್ಷದ ಸಂದರ್ಭ ಈ ಸಭೆ ನಡೆಸಲಾಗಿತ್ತು.

ಆ ಮೂವರ ಸಾವು ಯಾವ ಸನ್ನಿವೇಶದಲ್ಲಿ ನಡೆಯಿತು ಎಂಬ ಬಗ್ಗೆ ಇಂಗ್ಲೆಂಡ್‍ನ ಒಬ್ಬ ಕೊರೊನರ್ ಮೂಲಕ ತನಿಖೆ ನಡೆಸಬೇಕೆಂದೂ ಅವರು ಆಗ್ರಹಿಸಿದ್ದಾರೆ.

ಗುಜರಾತ್ ಹಿಂಸಾಚಾರದ ಸಂದರ್ಭ ಮೃತಪಟ್ಟ ಹಾಗೂ ಇಲ್ಲಿ ಉಲ್ಲೇಖಿಸಲ್ಪಟ್ಟ ಮೂವರು ಇಂಗ್ಲೆಂಡ್ ನಾಗರಿಕರಾಗಿದ್ದಾರೆ ಹಾಗೂ ಈ ಲೇಬರ್ ಸಂಸದರ ಕ್ಷೇತ್ರದ ನಿವಾಸಿಗಳಾಗಿದ್ದರು. ಶಕೀಲ್, ಸಯೀದ್ ದಾವೂದ್ ಮತ್ತು ಮುಹಮ್ಮದ್ ಅಸ್ವಾದ್ ಎಂಬ ಈ ಮೂವರು ತಾಜ್ ಮಹಲ್‍ಗೆ ಭೇಟಿ ಕೊಟ್ಟು ನಂತರ ಗುಜರಾತ್‍ಗೆ ಪ್ರಯಾಣಿಸುತ್ತಿದ್ದಾಗ ಹತ್ಯೆಗೀಡಾಗಿದ್ದರು. ಶಕೀಲ್ ಮತ್ತು ಸಯೀದ್ ಅವರ ಸೋದರಳಿಯ ಇಮ್ರಾನ್ ಈ ದಾಳಿಯಲ್ಲಿ ಬದುಕುಳಿದಿದ್ದರು.

ಈ ಸಭೆಯಲ್ಲಿ ನಡೆದ ಚರ್ಚೆಯನ್ನು ಲಂಡನ್‍ನಲ್ಲಿರುವ ಇಂಡಿಯನ್ ಮಿಷನ್ ಗಣನೆಗೆ ತೆಗೆದುಕೊಂಡಿದೆಯಾದರೂ ಈ ಕುರಿತು ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News