ರೈತರ ಮೇಲೆ ಕಾರು ಹರಿಸಿದ್ದ ಆರೋಪ: ಕೇಂದ್ರ ಸಚಿವನ ಪುತ್ರನಿಗೆ ಜಾಮೀನು
ಅಲಹಾಬಾದ್, ಫೆ. 10: ಕಳೆದ ವರ್ಷ ಉತ್ತರಪ್ರದೇಶದ ಲಖೀಂಪುರಕೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಹತ್ಯೆಗೈದ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠ ಜಾಮೀನು ಮಂಜೂರು ಮಾಡಿದೆ.
ಲಖಿಂಪುರಖೇರಿಯಲ್ಲಿ ಅಕ್ಟೋಬರ್ 3ರಂದು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಯುತ್ತಿರುವ ಸಂದರ್ಭ ನಾಲ್ವರು ರೈತರು ಹಾಗೂ ಪತ್ರಕರ್ತರೋರ್ವರ ಮೇಲೆ ಎಸ್‌ಯುವಿ ವಾಹನ ಚಲಾಯಿಸಿದ್ದ ಆರೋಪಕ್ಕೆ ಆಶಿಷ್ ಮಿಶ್ರಾ ಒಳಗಾಗಿದ್ದರು. ಅನಂತರ ಅವರನ್ನು ಬಂಧಿಸಲಾಗಿತ್ತು. ಎಸ್‌ಯುವಿ ವಾಹನ ವೇಗವಾಗಿ ಚಲಿಸಿ ರೈತರನ್ನು ಜಖಂಗೊಳಿಸುತ್ತಿರುವ ವೀಡಿಯೊ ಆಕ್ರೋಶ ಹಾಗೂ ಆಘಾತ ಉಂಟು ಮಾಡಿತ್ತು. ಅಂದು ಒಟ್ಟು 8 ಮಂದಿ ಮೃತಪಟ್ಟಿದ್ದರು.
ರೈತರ ಮೇಲೆ ವಾಹನ ಹರಿದ ಬಳಿಕ ಭುಗಿಲೆದ್ದ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಮತ್ತೆ ಮೂವರು ಸಾವನ್ನಪ್ಪಿದ್ದರು. ಈ ಹಿಂದೆ ಲಖಿಂಪುರಕೇರಿ ನ್ಯಾಯಾಲಯ ಅಶೀಶ್ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಉತ್ತರಪ್ರದೇಶ ಚುನಾವಣೆಯ ನಡುವೆ ಈ ಬೆಳವಣಿಗೆ ನಡೆದಿದೆ. ಉತ್ತರಪ್ರದೇಶದಲ್ಲಿ 7 ಹಂತದ ಮತದಾನ ನಡೆಯಲಿದ್ದು, ನಾಲ್ಕನೇ ಹಂತದಲ್ಲಿ ಲಖಿಂಪುರಖೇರಿ ಕ್ಷೇತ್ರದ ಮತದಾನ ನಡೆಯಲಿದೆ