ಡಿಜೆ ಹಾಕಿದ್ದಕ್ಕೆ ದಲಿತ ಸಮುದಾಯದ ಮದುವೆಯಲ್ಲಿ ದಾಂಧಲೆ: 38 ಮಂದಿಯ ವಿರುದ್ಧ ಪ್ರಕರಣ ದಾಖಲು
ರಾಜ್‌ಗಢ: ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯೊಬ್ಬರ ಮದುವೆ ಮೆರವಣಿಗೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಹನ್ನೊಂದು ಜನರನ್ನು ಬಂಧಿಸಲಾಗಿದೆ. ಹಾಗೂ ಇತರ 27 ಜನರು ಸೇರಿ ಒಟ್ಟು 38 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಶನಿವಾರ ತಡರಾತ್ರಿ ಕಚ್ನಾರಿಯಾ ಗ್ರಾಮದಲ್ಲಿ ವರ ರಾಜೇಶ್ ಅಹಿರ್ವಾರ್ ಅವರ ಸಂಬಂಧಿಕರು ಮ್ಯೂಸಿಕ್ ಸಿಸ್ಟಂ ಬಳಸಿ ಮೆರವಣಿಗೆ ನಡೆಸುವುದನ್ನು ತಡೆದ ಈ ಗುಂಪು, ಮದುವೆಯ ಸ್ಥಳದಲ್ಲಿ ದಾಂಧಲೆಯೆಬ್ಬಿಸಿದ್ದು, ಮ್ಯೂಸಿಕ್ ಹಾಕಿ ಕುಣಿದಕ್ಕಾಗಿ ಅಲ್ಲಿದ್ದ ಕೆಲವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ತಿಳಿಸಿದ್ದಾರೆ.
“ಜಿಲ್ಲಾಧಿಕಾರಿ ಮತ್ತು ನಾನು ಗ್ರಾಮಕ್ಕೆ ಭೇಟಿ ನೀಡಿ ವರನ ಕುಟುಂಬದೊಂದಿಗೆ ಮಾತನಾಡಿದೆವು. ನಾವು 38 ಜನರ ಮೇಲೆ ಪ್ರಕರಣ ದಾಖಲಿಸಿದ್ದೇವೆ, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ನಂತರ 11 ಮಂದಿಯನ್ನು ಬಂಧಿಸಲಾಗಿದೆ' ಎಂದು ಎಸ್ಪಿ ಮಾಹಿತಿ ನೀಡಿದರು.
ಮೂವರು ಆರೋಪಿಗಳು ಬಂದೂಕು ಪರವಾನಗಿ ಹೊಂದಿದ್ದು, ಅವುಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಗ್ರಾಮದಲ್ಲಿ ಹಲವಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ, ವರನ ಕುಟುಂಬಕ್ಕೆ ಎಲ್ಲಾ ಸಹಾಯ ಮತ್ತು ಸುರಕ್ಷತೆಯ ಭರವಸೆ ನೀಡಲಾಗಿದೆ ಎಂದು ಎಸ್ಪಿ ಹೇಳಿರುವುದಾಗಿ theprint.in ವರದಿ ಮಾಡಿದೆ.