ಧಾರ್ಮಿಕ ಭಾವನೆ, ಸಂವಿಧಾನಕ್ಕೆ ಗೌರವ ನೀಡಿ: ಹಿಜಾಬ್ ಪ್ರಕರಣದ ಕುರಿತು ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್

Update: 2022-02-14 02:48 GMT

ಜಮ್ಮು: ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಇತರರ ಧಾರ್ಮಿಕ ಭಾವನೆಗಳಿಗೆ ಹಾಗೂ ಸಂವಿಧಾನಕ್ಕೆ ಗೌರವ ನೀಡಬೇಕು ಎಂದು ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶನಿವಾರ ಹೇಳಿದ್ದಾರೆ. ಪುನರ್ವಿಂಗಡಣೆ ಆಯೋಗದ ವರದಿಯ ಬಗೆಗಿನ ಆತಂಕವನ್ನು ಅವರು ತಳ್ಳಿ ಹಾಕಿದರು. ಅಲ್ಲದೆ, ಭಾರತದ ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದ ಹಾಗೂ ಪಾರದರ್ಶಕ, ವೈಜ್ಞಾನಿಕ ರೀತಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಯಾವುದೇ ಪ್ರಮಾದ ಆಗಲಾರದು ಎಂಬ ಭರವಸೆ ಇದೆ ಎಂದರು ಎಂದು newindianexpress.com ವರದಿ ಮಾಡಿದೆ.

‘‘ನಾನು ಎರಡು ಅಂಶಗಳ ಬಗ್ಗೆ ಮಾತನಾಡುತ್ತೇನೆ. ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ ಹಾಗೂ ಸಂವಿಧಾನದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಿರಿ. ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಈ ಎರಡು ಅಂಶಗಳನ್ನು ತನ್ನ ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು’’ ಎಂದು ಸಿನ್ಹಾ ತಿಳಿಸಿದರು. ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಹಿಜಾಬ್ ಪ್ರಕರಣದ ಕುರಿತು ಪ್ರಶ್ನಿಸಿದಾಗ ಈ ಪ್ರತಿಕ್ರಿಯೆ ನೀಡಿದ ಸಿನ್ಹಾ ಅವರು, ಈಗ ಈ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಆದುದರಿಂದ ನಾನು ಹೆಚ್ಚು ಏನನ್ನೂ ಹೇಳಲು ಬಯಸುವುದಿಲ್ಲ ಎಂದರು.

ಶ್ರೀನಗರದಲ್ಲಿ ಮಹಿಳೆಯೋರ್ವರ ಮೇಲೆ ನಡೆದ ಆ್ಯಸಿಡ್ ದಾಳಿಯ ಬಗ್ಗೆ ಅವರು ಉಲ್ಲೇಖಿಸಿದರು ಹಾಗೂ ‘‘ಆಕೆಯ ಚಿಕಿತ್ಸೆಗೆ ನಾವು ಎಲ್ಲ ವ್ಯವಸ್ಥೆ ಮಾಡಿದ್ದೇವೆ. ಬಾಲಕಿ ಚೆನ್ನೈಯ ಆಸ್ಪತ್ರೆಯಲ್ಲಿ ಇದ್ದಾಳೆ. ನಮ್ಮ ಒಬ್ಬರು ಹಿರಿಯ ಅಧಿಕಾರಿ ಕೂಡ ಅಲ್ಲೇ ಇದ್ದಾರೆ. ಆಕೆಯ ಆರೋಗ್ಯದ ಬಗ್ಗೆ ನಾನು ಪ್ರತಿದಿನ ಮಾಹಿತಿ ಪಡೆಯುತ್ತಿದ್ದೇನೆ. ತಪ್ಪೆಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಸಿನ್ಹಾ ತಿಳಿಸಿದರು.

ಸಹ ಸದಸ್ಯರೊಂದಿಗೆ ಹಂಚಿಕೆ ಮಾಡಿದ ಪುನರ್ವಿಂಗಡಣೆ ಆಯೋಗದ ಕರಡು ವರದಿಯ ಕುರಿತಂತೆ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಕುರಿತು ಪ್ರಶ್ನಿಸಿದಾಗ ಮನೋಜ್ ಸಿನ್ಹಾ ಅವರು, ಚುನಾವಣಾ ಆಯೋಗ ಸಾಂವಿಧಾನಿಕ ಹಾಗೂ ಗೌರವಾನ್ವಿತ ಸಂಸ್ಥೆ. ಅದರ ಯಾವುದೇ ನಿರ್ಧಾರವನ್ನು ಟೀಕಿಸುವುದು ಉತ್ತಮವಲ್ಲ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News