ಇಸ್ರೋದಿಂದ ರಾಡಾರ್ ಇಮೇಜಿಂಗ್ ಉಪಗ್ರಹ ಉಡಾವಣೆ

Update: 2022-02-14 03:33 GMT
Screengrab(Twitter/@isro)

ಹೊಸದಿಲ್ಲಿ: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಮುಂಜಾನೆ 5.59ಕ್ಕೆ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ ಜತೆಗೆ ಎರಡು ಸಣ್ಣ ಉಪಗ್ರಹಗಳನ್ನು ಉಡಾಯಿಸಿದೆ. 2022ರಲ್ಲಿ ಇದು ಇಸ್ರೋದ ಮೊದಲ ಉಡಾವಣೆಯಾಗಿದ್ದು, ರವಿವಾರ ಇದಕ್ಕೆ 25 ಗಂಟೆಗಳ ಕ್ಷಣಗಣನೆ ಆರಂಭವಾಗಿತ್ತು.

"ಪಿಎಸ್‍ಎಲ್‍ವಿ-ಸಿ52/ಇಓಎಸ್-04 ಮಿಷನ್‍ನ 25 ಗಂಟೆ 30 ನಿಮಿಷದ ಕ್ಷಣಗಣನೆ ಪ್ರಕ್ರಿಯೆಯ ಬಳಿಕ ಇಂದು 4.29ಕ್ಕೆ ಉಡಾವಣೆ ಪ್ರಕ್ರಿಯೆ ಆರಂಭವಾಯಿತು" ಎಂದು ಇಸ್ರೋ ಟ್ವೀಟ್ ಮಾಡಿದೆ.

ಭೂ ವೀಕ್ಷಣೆ ಉಪಗ್ರಹ ಇಓಎಸ್-4 ನ್ನು ಕಕ್ಷೆಗೆ ಸೇರಿಸಲು ಅನುವಾಗುವಂತೆ ಉಡಾವಣಾ ವಾಹಕವನ್ನು ವಿನ್ಯಾಸಗೊಳಿಸಲಾಗಿತ್ತು. ಇದು 1710 ಕೆ.ಜಿ. ತೂಕ ಹೊಂದಿದ್ದು, 529 ಕಿಲೋಮೀಟರ್ ನ ಸನ್ ಸಿಕ್ರೊನೈಸ್ ಪೋಲಾರ್ ಆರ್ಬಿಟ್‍ಗೆ ಇದನ್ನು ಸೇರಿಸಲಾಗುತ್ತದೆ.

ಇಓಎಸ್-04 ಒಂದು ರಾಡಾರ್ ಇಮೇಜಿಂಗ್ ಉಪಗ್ರಹವಾಗಿದ್ದು, ಎಲ್ಲ ಹವಾಮಾನ ಪರಿಸ್ಥಿತಿಯಲ್ಲಿ ಉನ್ನತ ಗುಣಮಟ್ಟದ ಇಮೇಜ್‍ಗಳನ್ನು ಒದಗಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಕೃಷಿ, ಅರಣ್ಯ, ತೊಟಗಾರಿಕೆ, ಮಣ್ಣಿನ ಆದ್ರ್ರತೆ ಮತ್ತು ಹೈಡ್ರಾಲಜಿ ಹಾಗೂ ಪ್ರವಾಹ ಮ್ಯಾಪಿಂಗ್‍ಗಾಗಿ ಇದನ್ನು ಬಳಸಬಹುದಾಗಿದೆ.

ಎರಡು ಸಹ ಉಪಗ್ರಹಗಳಲ್ಲಿ ವಿದ್ಯಾರ್ಥಿ ಉಪಗ್ರಹ (ಇನ್‍ಸ್ಪೈರ್‍ಸ್ಯಾಟ್-1) ಕೂಡಾ ಸೇರಿದೆ. ಇಂಡಿಯನ್ ಇನ್‍ಸ್ಟಿಟ್ಯುಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿಯು ಕೊಲೊರಾಡೊ ವಿಶ್ವವಿದ್ಯಾನಿಲಯದ ಲ್ಯಾಬೊರೇಟರಿ ಆಫ್ ಅಟ್ಮೋಸ್ಪಿಯರಿಕ್ ಅಂಡ್ ಸ್ಪೇಸ್ ಫಿಸಿಕ್ಸ್ ವಿಭಾಗದ ಸಹಯೋಗದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿತ್ತು. ಸಿಂಗಾಪುರದ ಎನ್‍ಟಿಯು ಹಾಗೂ ತೈವಾನ್‍ನ ಎನ್‍ಸಿಯು ಕೂಡಾ ಇದಕ್ಕೆ ನೆರವು ನೀಡಿದ್ದವು.

ಇನ್ನೊಂದು ತಂತ್ರಜ್ಞಾನ ಡೆಮೋನ್ಟ್ರೇಟರ್ ಉಪಗ್ರಹವಾಗಿದ್ದು, ಇಸ್ರೋ ಇದನ್ನು ಅಭಿವೃದ್ಧಿಪಡಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News