ನಿರುದ್ಯೋಗ, ಕಪ್ಪು ಹಣದ ಕುರಿತು ಕೇಂದ್ರ ಸರಕಾರಕ್ಕೆ ರಾಹುಲ್ ಗಾಂಧಿ ತರಾಟೆ

Update: 2022-02-14 16:39 GMT

ಹೋಶಿಯಾರ್ಪುರ, ಫೆ. 14: ನಿರುದ್ಯೋಗ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಅವರು ತನ್ನ ಚುನಾವಣಾ ಭಾಷಣದಲ್ಲಿ ನಿರುದ್ಯೋಗ ಹಾಗೂ ಕಪ್ಪು ಹಣದ ಬಗ್ಗೆ ಮಾತನಾಡುತ್ತಿಲ್ಲ ಎಂದಿದ್ದಾರೆ.

ಇಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣ ಹಾಗೂ ಜಿಎಸ್ಟಿ ಕುರಿತು ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಂಡರು ಹಾಗೂ ಇದರಿಂದ ಇಬ್ಬರು ಮೂವರು ಶತ ಕೋಟ್ಯಧೀಶರಿಗೆ ಮಾತ್ರ ಲಾಭವಾಗಿದೆ ಎಂದರು. ತನ್ನ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರಣ್ಜಿತ್ ಸಿಂಗ್ ಚನ್ನಿ ಅವರಿಗೆ ಬಡತನ ಅರ್ಥವಾಗುತ್ತದೆ ಎಂದು ಹೇಳಿದ ರಾಹುಲ್ ಗಾಂಧಿ, ಬಡಜನರ, ರೈತರ, ಸಣ್ಣ ಹಾಗೂ ಮಧ್ಯಮ ವ್ಯಾಪಾರಸ್ಥರ ಸರಕಾರದ ನೇತೃತ್ವವನ್ನು ಚನ್ನಿ ವಹಿಸಲಿದ್ದಾರೆ ಎಂದರು. ‘‘ನಮ್ಮ ಮುಂದೆ ಪಂಜಾಬ್ ಚುನಾವಣೆ ಇದೆ.

ಇದು ಸಾಮಾನ್ಯ ಚುನಾವಣೆ ಅಲ್ಲ. ನೀವು ನೂತನ ಸರಕಾರವನ್ನು ಆಯ್ಕೆ ಮಾಡಬೇಕು. ಇಂದು ದೇಶದಲ್ಲಿ, ಪ್ರತಿ ರಾಜ್ಯದಲ್ಲಿ ನಿರುದ್ಯೋಗದ ಸಂಖ್ಯೆ ಹೆಚ್ಚುತ್ತಿದೆ’’ ಎಂದು ರಾಹುಲ್ ಗಾಂಧಿ ಹೇಳಿದರು. ಇದು ಕಪ್ಪು ಹಣದ ವಿರುದ್ಧ ಹೋರಾಟ ಎಂದು ನೋಟು ಅಮಾನ್ಯೀಕರಣದ ಸಂದರ್ಭ ಮೋದಿ ಸರಕಾರ ಹೇಳಿತ್ತು. ಆದರೆ, ಸಣ್ಣ ವ್ಯಾಪಾರಸ್ಥರು ಹಾಗೂ ರೈತರ ಕಿಸೆಯಿಂದ ಹಣವನ್ನು ಹೊರಗೆಳೆಯಲಾಯಿತು ಹಾಗೂ ಮೂರ್ನಾಲ್ಕು ಮಂದಿ ಶತ ಕೋಟ್ಯಾಧಿಪತಿಗಳಿಗೆ ನೀಡಲಾಯಿತು ಎಂದು ಅವರು ಹೇಳಿದರು. ‘‘ಮೋದಿ ಜಿ ಅವರು ಪ್ರತಿ ಬಾರಿ ಮಾತನಾಡುವಾಗ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ವರ್ಗಾಯಿಸಲಾಗುವುದು, ಯುವ ಜನರಿಗೆ 2 ಕೋಟಿ ಉದ್ಯೋಗಗಳನ್ನು ನೀಡಲಾಗುವುದು ಎಂದು ಹೇಳುತ್ತಿದ್ದರು’’ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವನ್ನು ಕೂಡ ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ‘‘ಆಪ್ ಪಂಜಾಬ್ ಅನ್ನು ಅರ್ಥ ಮಾಡಿಕೊಂಡಿಲ್ಲ ಹಾಗೂ ಆ ರಾಜ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಮಾತ್ರ ಪಂಜಾಬ್ ಅನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಹಾಗೂ ಮುಂದೆ ನಡೆಸಲು ಸಾಧ್ಯ’’ ಎಂದರು. ನಮ್ಮ ಸರಕಾರ ಇಬ್ಬರು ಮೂವರು ಶತ ಕೋಟ್ಯಧಿಪತಿಗಳದ್ದಲ್ಲ. ಹಾಗಿದ್ದರೆ, ಪಂಜಾಬ್ ನಲ್ಲಿ  ಕಾಂಗ್ರೆಸ್ ಕೃಷಿ ಕಾಯ್ದೆಯನ್ನು ಬೆಂಬಲಿಸುತ್ತಿರಲಿಲ್ಲ. ನಮ್ಮ ಸರಕಾರ ರೈತ ಪರ ಸರಕಾರವಾಗಿರುವ ಕಾರಣಕ್ಕೆ ನಾವು ರೈತರ ಪರ ನಿಂತೆವು ಎಂದು ರಾಹುಲ್ ಗಾಂಧಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News