ಉ.ಪ್ರ.: ಸಮಾಜವಾದಿ ಪಕ್ಷದ ಬೂತ್ ಏಜೆಂಟ್ ಅನ್ನು ಗುಂಡು ಹಾರಿಸಿ ಹತ್ಯೆಗೈದ ದುಷ್ಕರ್ಮಿಗಳು

Update: 2022-02-15 15:53 GMT

ಸಾಂದರ್ಭಿಕ ಚಿತ್ರ
 

ಶಾಹಜಹಾನಪುರ (ಉತ್ತರಪ್ರದೇಶ), ಫೆ. 15: ತಿಹಾರ್ ಕ್ಷೇತ್ರದಲ್ಲಿ ಮತದಾನದ ಸಂದರ್ಭ ನಡೆದ ವಿವಾದದ ಹಿನ್ನೆಲೆಯಲ್ಲಿ ವಿಕ್ರಮಪುರ ಚಕೋರ ಗ್ರಾಮದಲ್ಲಿ ಸಮಾಜವಾದಿ ಪಕ್ಷದ ಬೂತ್ ಏಜೆಂಟ್ ಓರ್ವನನ್ನು ವಿರೋಧಿ ಗುಂಪು ಮಂಗಳವಾರ ಗುಂಡು ಹಾರಿಸಿ ಹತ್ಯೆಗೈದಿದೆ. 

‘‘ವಿಕ್ರಮಪುರ ಚಕೋರ ಗ್ರಾಮದ ನಿವಾಸಿಯಾಗಿರುವ ಸಮಾಜವಾದಿ ಪಕ್ಷದ ಬೂತ್ ಏಜೆಂಟ್ ಸುಧೀರ್ ಕುಮಾರ್ (20) ಅವರ ಮೇಲೆ ಮಂಗಳವಾರ ಬೆಳಗ್ಗೆ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ. ಈ ಘಟನೆಯಲ್ಲಿ ಕೆಲವು ಗ್ರಾಮಸ್ಥರು ಕೂಡ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ’’ ಎಂದು ಪೊಲೀಸ್ ಅಧೀಕ್ಷಕ (ನಗರ) ಸಂಜಯ್ ಕುಮಾರ್ ಅವರು ತಿಳಿಸಿದ್ದಾರೆ. 

ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯ ಎರಡನೇ ಹಂತದಲ್ಲಿ ತಿಹಾರ್ ಕ್ಷೇತ್ರದಲ್ಲಿ ಮತ ಚಲಾಯಿಸುವ ಕುರಿತಂತೆ ಗ್ರಾಮಸ್ಥರ ಒಂದು ಗುಂಪು ಹಾಗೂ ಸುಧೀರ್ ಕುಮಾರ್ ಅವರ ನಡುವೆ ಸೋಮವಾರ ರಾತ್ರಿ ವಾಗ್ವಾದ ನಡೆದಿತ್ತು ಎಂದು ಅವರು ತಿಳಿಸಿದ್ದಾರೆ. ವಿಕ್ರಮಪುರ ಚಕೋರ ಗ್ರಾಮ ನಿಗೋಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತಿದ್ದು, ಅಲ್ಲಿನ ಪರಿಸ್ಥಿತಿ ಬಗ್ಗೆ ನಿಗಾ ಇರಿಸಲಾಗಿದೆ. ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ನಿಗೋಯಿ ಪೊಲೀಸ್ ಠಾಣೆಯ ಉಸ್ತುವಾರಿ ದಿಲೀಪ್ ಕುಮಾರ್ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News