ಸೇನೆಯ ಮಹಿಳಾ ಅಧಿಕಾರಿಗಳಿಗೆ ವರ್ಷದಿಂದ ಸಿಗದ ಪಿಂಚಣಿ: ವರದಿ

Update: 2022-02-16 03:31 GMT
ಸಾಂದರ್ಭಿಕ ಚಿತ್ರ (Photo: PTI)

ಹೊಸದಿಲ್ಲಿ: ಲಿಂಗ ಸಮಾನತೆ ಸಂಬಂಧ 2020ರಲ್ಲಿ ನೀಡಿದ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಪಿಂಚಣಿಗೆ ಅರ್ಹರಾಗಿದ್ದರೂ, ಭಾರತೀಯ ಸೇನೆಯ ಹಲವು ಮಂದಿ ಮಹಿಳಾ ಅಧಿಕಾರಿಗಳಿಗೆ ತಮ್ಮ ನಿವೃತ್ತಿಯ ಒಂದು ವರ್ಷದ ಬಳಿಕ ಕೂಡಾ ಪಿಂಚಣಿ ಸಿಗುತ್ತಿಲ್ಲ ಎಂಬ ಅಂಶ ಬಹಿರಂಗವಾಗಿದೆ.

ಸಾಲಗಳ ಮರುಪಾವತಿಗೆ ಹೆಣಗಾಡಬೇಕಾದ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ಭವಿಷ್ಯನಿಧಿ ಹಣದಲ್ಲೇ ಜೀವನ ಸಾಗಿಸಬೇಕಾದ ಹಿನ್ನೆಲೆಯಲ್ಲಿ ಹಣಕಾಸು ಒತ್ತಡದಿಂದಾಗಿ ಉದ್ವಿಗ್ನತೆ ಮತ್ತು ಖಿನ್ನತೆ ಎದುರಾಗಿದೆ ಎಂದು ಹಲವು ಮಂದಿ ಮಹಿಳಾ ಅಧಿಕಾರಿಗಳು ದೂರಿದ್ದಾರೆ. ಕೇಂದ್ರ ಸರ್ಕಾರ ಕಳೆದ ವರ್ಷ ಆರಂಭಿಸಿರುವ ಹೊಸ ಪಿಂಚಣಿ ವಿತರಣೆ ವ್ಯವಸ್ಥೆಯೇ ಈ ಸಮಸ್ಯೆಯ ಮೂಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಕನಿಷ್ಠ 15 ಶಾರ್ಟ್‍ಸರ್ವೀಸ್ ಕಮಿಷನ್ (ಎಸ್‍ಎಸ್‍ಸಿ) ಮಹಿಳಾ ಅಧಿಕಾರಿಗಳು 20 ವರ್ಷಗಳ ಸೇವೆ ಸಲ್ಲಿಸಿ 2021ರಲ್ಲಿ ನಿವೃತ್ತರಾಗಿದ್ದು, ಇವರೆಲ್ಲರೂ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಹಲವು ಬಾರಿ ಸರ್ಕಾರದ ಪಿಂಚಣಿ ವಿತರಣೆ ಅಧಿಕಾರಿಗಳಿಗೆ ಕೂಡಾ ವಿವರಿಸಿದ್ದಾರೆ. ಸರ್ಕಾರದ ರಕ್ಷಣಾ ಸೇವಾ ಅಧಿಕಾರಿಗಳು ಪಿಂಚಣಿಗೆ ಅರ್ಹರಾಗಬೇಕಾದರೆ ಕನಿಷ್ಠ 20 ವರ್ಷ ಸೇವೆ ಸಲ್ಲಿಸಿರಬೇಕು.

ಸಶಸ್ತ್ರ ಪಡೆಗಳಲ್ಲಿ ಲಿಂಗ ಅಂತರವನ್ನು ಕಡಿತಗೊಳಿಸುವ ಸಂಬಂಧ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಎರಡು ವರ್ಷ ಬಳಿಕವಷ್ಟೇ ಎಸ್‍ಎಸ್‍ಸಿ ಮಹಿಳಾ ಅಧಿಕಾರಿಗಳು ಕಾಯಂ ಕಮಿಷನ್ (ಪಿಸಿ)ಗೆ ಮತ್ತು ಪಿಂಚಣಿಗೆ ಅರ್ಹರಾಗಿದ್ದರು. ಪಿಂಚಣಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೂಚನೆಗಳು ಕೂಡಾ ಗೊಂದಲದಿಂದ ಕೂಡಿವೆ.

ನಲವತ್ತು ವಯಸ್ಸಿನ ಆಸುಪಾಸಿನಲ್ಲಿ ನಿವೃತ್ತರಾದ ಮಹಿಳಾ ಲೆಫ್ಟಿನೆಂಟ್ ಕರ್ನಲ್‍ಗಳಿಗೆ ಪಿಂಚಣಿ ಮಂಜೂರಾಗಿಲ್ಲ. ಏಕೆಂದರೆ ಅವರ ಪ್ರಕರಣಗಳನ್ನು ಸ್ಪರ್ಷ್ ಎಂಬ ಹೊಸ ಆನ್‍ಲೈನ್ ಪಿಂಚಣಿ ವಿತರಣೆ ವ್ಯವಸ್ಥೆಯಲ್ಲಿ ಸಂಸ್ಕರಿಸಲಾಗುತ್ತಿದೆ. ಇದನ್ನು ಅಲಹಾಬಾದ್ ಮೂಲದ ಪ್ರಿನ್ಸಿಪಲ್ ಕಂಟ್ರೋಲರ್ ಆಫ್ ಡಿಫೆನ್ಸ ಅಕೌಂಟ್ಸ್ (ಪಿಂಚಣಿ) ನಿಯಂತ್ರಿಸುತ್ತಾರೆ ಎಂದು ವರದಿಯಾಗಿದೆ.

ಈ ಮಹಿಳಾ ಅಧಿಕಾರಿಗಳು ಪಿಂಚಣಿಗೆ ಅರ್ಹರೇ ಎನ್ನುವುದು ಸ್ಪಷ್ಟವಾಗದಿರುವುದು ಸಮಸ್ಯೆಗೆ ಕಾರಣ ಎಂದು ಕಂಟ್ರೋಲರ್ ಜನರಲ್ ಆಫ್ ಡಿಫೆನ್ಸ್ ಅಕೌಂಟ್ಸ್ ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News